ಹಿಂಗಾರ ಕರಟುವ ರೋಗ: ಅಡಕೆ ನಾಶ ಭೀತಿಯಲ್ಲಿ ಕೃಷಿಕ ಆತ್ಮಹತ್ಯೆ

ಕಾಸರಗೋಡು: ಹಿಂಗಾರ ಕರಟುವ ರೋಗದಿಂದಾಗಿ ಆರ್ಥಿಕ ಸಂದಿಗ್ಧತೆಯಲ್ಲಿ ಸಿಲುಕಿದ ಅಡಕೆ ಕೃಷಿಕ ಹೊಂಡಕ್ಕೆ ಹಾರಿ ಆತ್ಮಹತ್ಯೆಗೈದಿದ್ದಾರೆ. ಕರ್ನಾಟಕ ಸಾಗರ ಬ್ಯಾಕೋಡು  ನಿವಾಸಿ ಹಾಗೂ ಕೃಷಿಕನಾದ ಅಶೋಕ (42) ಆತ್ಮಹತ್ಯೆಗೈದವರು. 2 ಎಕ್ರೆ ಸ್ಥಳದಲ್ಲಿ ಇವರು ಅಡಕೆ ಕೃಷಿ ಮಾಡಿದ್ದರು. ಸತತ ಸುರಿದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಿಂಗಾರವೆಲ್ಲಾ ಕರಟಿ ಉದುರಿ ನಾಶಗೊಂಡಿತ್ತು. ಬ್ಯಾಂಕ್‌ನಿಂದ ಸಾಲ ತೆಗೆದು ಅಶೋಕ ಈ ಬಾರಿಯೂ ಕಂಗು ಕೃಷಿಗೆ ಅಗತ್ಯದ ಗೊಬ್ಬರ ಹಾಗೂ ಔಷಧ ಸಿಂಪಡಣೆ ನಡೆಸಿದ್ದರು. ಈ ಸಾಲವನ್ನು ತೀರಿಸುವ, ಜೀವನ ನಿರ್ವಹಣೆಗೆ ದಾರಿ ಕಾಣದೆ ಕಂಗೆಟ್ಟ ಅಶೋಕ ಆತ್ಮಹತ್ಯೆ ಗೈದಿರಬೇಕೆಂದು ಶಂಕಿಸಲಾಗಿದೆ.ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲೂ ಕಂಗು ಕೃಷಿಕರು ದೊಡ್ಡ ಸಂದಿಗ್ಧತೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಕಂಡು ಬರುವ ಹಿಂಗಾರ ಕರಟಿ ಉದುರುವ ರೋಗ ಕಾಸರಗೋಡು ಜಿಲ್ಲೆಯ ವಿವಿಧ ಕಡೆಗಳಲ್ಲೂ ವ್ಯಾಪಕವಾಗಿ ಕಂಡು ಬರುತ್ತಿದೆ. ಕಳೆದ ವರ್ಷದ ಅರ್ಧದಷ್ಟು ಕೂಡಾ ಈ ಬಾರಿ ಫಸಲು ಲಭಿಸದು ಎಂಬ ಆತಂಕ ಕೃಷಿಕರಲ್ಲಿದೆ. ಹಲವರು ಸಾಲ ಮಾಡಿ ಕೃಷಿ ಕೈಗೊಂಡವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ನಾಶಗೊಂಡಿರುವುದು ಕೃಷಿಕರನ್ನು ಕಂಗೆಡಿಸಿದ್ದು, ಸರಕಾರ ಕೃಷಿಕರ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

Leave a Reply

Your email address will not be published. Required fields are marked *

You cannot copy content of this page