ಹೇ… ಐಸ್ ಕ್ರೀಂ ಜಾನು…ನೀನು ಎಲ್ಲಿದ್ದಿಯಾ?
ಬದಿಯಡ್ಕ: ಬದಿಯಡ್ಕ ಬಸ್ ನಿಲ್ದಾಣ ಸಮೀಪದ ಜನರು ಕಳೆದ ಎಂಟು ದಿನಗಳಿಂದ ಅಲ್ಪ ಮನೋವೇದನೆಯಿಂದಿದ್ದಾರೆ. ಅದಕ್ಕೆ ಕಾರಣ ಅವರನ್ನು ದಿನನಿತ್ಯವೂ ಸ್ನೇಹ ಪೂರ್ವಕ ವರ್ತನೆ ಯಿಂದ ಮನಗೆದ್ದಿದ್ದ ನಾಯಿ ಯೊಂದು ನಾಪತ್ತೆಯಾಗಿರುವುದೇ ಆಗಿದೆ. ಜಾನು ಎಂಬ ಹೆಸರಿನ ಈ ಶ್ವಾನ ಬದಿಯಡ್ಕ ಬಸ್ ನಿಲ್ದಾಣ ಪರಿಸರದಲ್ಲಿ ಕಳೆದ ನಾಲ್ಕೈದು ವರ್ಷದಿಂದ ತಿರುಗಾಡಿ ಇಲ್ಲಿನವರು ನೀಡಿದ ಆಹಾರವನ್ನು ತಿನ್ನುತ್ತಿತ್ತು. ಯಾವುದೇ ಉಪಟಳ ನೀಡದೆ ಬಸ್ ನಿಲ್ದಾಣಕ್ಕೆ ಕಾವಲುಗಾರನಂತಿದ್ದ ಈ ನಾಯಿಗೆ ಐಸ್ ಕ್ರೀಂ ಎಂದರೆ ಪಂಚಪ್ರಾಣ. ದಿನವೊಂದಕ್ಕೆ ಸುಮಾರು ೨೫ರಷ್ಟು ಐಸ್ ಕ್ರೀಂ ಈ ನಾಯಿ ತಿನ್ನುತ್ತಿತ್ತೆಂದು ಬಸ್ ನಿಲ್ದಾಣದಲ್ಲಿ ಪತ್ರಿಕೆ ವಿತರಿಸುವ ಬಾಲಕೃಷ್ಣ ತಿಳಿಸುತ್ತಾರೆ.
ಈ ನಾಯಿಗೆ ಇಲ್ಲಿನ ವರು ಹೆಚ್ಚಾಗಿ ಐಸ್‌ಕ್ರೀಂ ನೀಡುತ್ತಿದ್ದರು. ಆದರೆ ಕಳೆದ ಎಂಟು ದಿನಗಳಿಂದ ನಾಯಿ ನಾಪತ್ತೆಯಾಗಿದೆ. ಈ ಪರಿಸರದಲ್ಲೆಲ್ಲೂ ಕಾಣದ ಈ ನಾಯಿಯ ಪ್ರೀತಿಪೂರ್ವಕ ವರ್ತನೆ ಇಲ್ಲಿನವರ ಮನದಲ್ಲಿ ಅಚ್ಚಳಿಯದೆ ನಿಂತಿದೆ.