ಹೊಸಂಗಡಿಯಲ್ಲಿ ಯುರೋಪಿಯನ್ ಮಾದರಿಯಲ್ಲಿ ೩೦ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವಿಶ್ರಾಂತಿ ಸಮುಚ್ಛಯ ನಿರ್ಮಾಣ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಮೂಲಕದ ವಾಹನ ಪ್ರಯಾಣಿಕರಿಗೆ ಪ್ರಾಥಮಿಕ ಅಗತ್ಯಗಳನ್ನು ನಿರ್ವಹಿಸಲು ಹೊಸಂಗಡಿಯಲ್ಲಿ ಯು.ಎಸ್ ಯುರೋಪಿಯನ್ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೆಸ್ಟ್ ಸ್ಟೋಪ್ (ವಿಶ್ರಾಂತಿ ಸಮುಚ್ಚಯ)ನಿರ್ಮಿಸಲು ತೀರ್ಮಾ ನಿಸಲಾಗಿದೆ. ಇದು ೩೦ ಕೋಟಿ ರೂ. ಗಳವೆಚ್ಚ ನಿರೀಕ್ಷಿಸುವ ಯೋಜನೆ ಯಾಗಿದೆ. ಈ ವಿಶ್ರಾಂತಿ ಸಮುಚ್ಛಯ ನಿರ್ಮಿಸುವ ಸ್ಥಳ ಪರಿಶೀಲನೆ ಈಗಾಗಲೇ ಆರಂಭಗೊಂಡಿದೆ. ಈ ಕೇಂದ್ರ ಸ್ಥಾಪಿಸಲು ರಾಜ್ಯ ಸರಕಾರ ಹೊಸಂಗಡಿಯಲ್ಲಿ ಈಗಾಗಲೇ ಐದು ಎಕ್ರೆ ಸ್ಥಳ ಬಿಟ್ಟುಕೊಟ್ಟಿದೆ. ಈ ಪ್ರದೇಶದ ಮಣ್ಣು ಪರೀಕ್ಷೆ ೧೦ ದಿನಗಳಿಂದ ಆರಂಭಗೊಂಡಿದ್ದು, ಅದು ಈಗಲೂ ಮುಂದುವರಿಯು ತ್ತಿದೆ. ಮಣ್ಣು ಪರೀಕ್ಷೆ ಪೂರ್ಣಗೊಂಡ ಬಳಿಕ ವಿಶ್ರಾಂತಿ ಸಮುಚ್ಛಯದ ಡಿಸೈನ್ ತಯಾರಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಕೆಲಸ ಪೂರ್ಣಗೊ ಳ್ಳುವುದರ ಜತೆಗೆ ಈ ವಿಶ್ರಾಂತಿ ಕೇಂದ್ರದ ನಿರ್ಮಾಣ ಕೆಲಸ ಪೂರ್ತೀ ಕರಿಸಿ, ಅದನ್ನು ಲೋಕಾರ್ಪಣೆ ಗೈಯ್ಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಏಕಕಾಲದಲ್ಲಿ ೨೫೦ ಕಾರುಗಳು, ೧೦ ಬಸ್ಗಳು ಮತ್ತು ಐದು ಕಾರವನ್ ಇತ್ಯಾದಿ ವಾಹನಗಳ ಪಾರ್ಕಿಂಗ್ ಸೌಕರ್ಯ, ವಾಹನಗಳ ದುರಸ್ತಿ ಕೆಲಸ ನಡೆಸುವ ಕೇಂದ್ರ, ವಿಮಾನ ನಿಲ್ದಾಣಗಳಲ್ಲಿರುವ ಮಾದರಿಯಲ್ಲಿ ೫೦ ಶೌಚಾಲಯಗಳು, ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ, ವಿಮಾನ ಲ್ಯಾಂಚಿಂಗ್ ಮಾದರಿಯ ವಿಶ್ರಾಂತಿ ಕೊಠಡಿಗಳು, ಫುಡ್ ಕೋರ್ಟ್, ಆಹಾರ, ಫಾರ್ಮಸಿ, ಬುಕ್ಸ್ಟಾಲ್, ಮಕ್ಕಳಿಗೆ ಆಡಲು ಪುಟ್ಟ ಉದ್ಯಾನ ಸ್ಥಳೀಯ ಕ್ರಾಫ್ಟ್ ಶಾಪ್, ವಿವಿಧ ಉತ್ಪನ್ನಗಳ ಮಾರಾಟ ಕೇಂದ್ರ, ವಾಚನಾಲಯ ಇತ್ಯಾದಿ ಸೌಕರ್ಯ ಗಳು ಈ ಸಮು ಚ್ಛಯ ಹೊಂದಲಿದೆ. ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳನ್ನು ಪ್ರಯಾಣಿಕರು ಉಚಿತವಾಗಿ ಉಪಯೋಗಿಸುವ ಸೌಕರ್ಯ ಏರ್ಪಡಿಸಲಾಗಿದೆ.
ಮೂರು ಶಿಫ್ಟ್ಗಳಲ್ಲಾಗಿ ದೈನಂದಿನ ೨೪ ತಾಸುಗಳ ತನಕವೂ ಕಾರ್ಯ ವೆಸಗುವ ಹಲವು ಮಾರಾಟ ಕೇಂದ್ರಗಳೂ ಈ ಸಮುಚ್ಛಯದಲ್ಲಿ ಒಳಗೊಳ್ಳಲಿದೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಐದು ಸಾವಿದಷ್ಟು ಮಂದಿಗೆ ಕೆಲಸ ಲಭಿಸುವ ನಿರೀಕ್ಷೆಯೂ ಇದೆ.