ಹೊಸಂಗಡಿ ಪೇಟೆಯ ಮಧ್ಯದಲ್ಲಿ ಹರಿಯುತ್ತಿದೆ ಮಲಿನ ಜಲ: ಪಂ. ಅಧಿಕಾರಿಗಳಿಂದ ತಪಾಸಣೆ
ಮಂಜೇಶ್ವರ: ಹೊಸಂಗಡಿ ಪೇಟೆಯ ಮಧ್ಯ ಭಾಗದಲ್ಲಿ ಚರಂಡಿಯ ಮಲಿನ ನೀರು ರಸ್ತೆಯಲ್ಲಿ ಹರಿದು ಪರಿಸರ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಹುಟ್ಟಿಸಿದೆ. ಷಟ್ಪಥ ರಸ್ತೆಯ ಕಾಮಗಾರಿ ಆರಂಭವಾಗುವ ಮೊದಲೇ ಫ್ಲ್ಯಾಟ್ ಹಾಗೂ ಹೋಟೆಲ್ ಸೇರಿದಂತೆ ವಿವಿಧ ವ್ಯಾಪಾರ ಕೇಂ ದ್ರಗಳಿಂದ ತ್ಯಾಜ್ಯ ನೀರು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡಲಾಗುತ್ತಿತ್ತು. ಇದರ ದುರ್ವಾಸನೆ ಪರಿಸರ ನಿವಾಸಿಗಳಿಗೆ ಸಮಸ್ಯೆ ಸೃಷ್ಟಿಸಿತ್ತು. ಆದರೆ ಈಗ ರಸ್ತೆ ಕಾಮಗಾರಿ ಆರಂಭಗೊಂಡು ಬದಲಿ ಚರಂಡಿ ವ್ಯವಸ್ಥೆ ನಡೆಯುತ್ತಿರುವಾಗ ಹಳೆ ಚರಂಡಿಯನ್ನು ಮುಚ್ಚದ ಕಾರಣ ಆ ಚರಂಡಿಗೆ ಈಗಲೂ ಫ್ಲ್ಯಾಟ್, ವ್ಯಾಪಾರ ಕೇಂದ್ರಗಳ ಮಲಿನ ಜಲವನ್ನು ಹರಿಯಬಿಡುತ್ತಿರುವುದಾಗಿ ದೂರಲಾಗಿದೆ. ಈ ಬಗ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ, ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್, ಪಂ. ಸದಸ್ಯೆ ರಾಧಾ, ಕಾರ್ಯದರ್ಶಿ ಸುಧೀರ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ವ್ಯಾಪಾರಿ ಸಂಘಟನೆಯ ಅಧ್ಯಕ್ಷ ಬಶೀರ್ ಕನಿಲ, ಎಐಟಿಯುಸಿ ಜಿಲ್ಲಾಧ್ಯಕ್ಷ ಮುಸ್ತಫ ಕಡಂಬಾರ್ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದರು. ಹಳೇ ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚಲು ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಪಂಚಾಯತ್ ಅಧಿಕಾರಿಗಳು ಸ್ಥಳೀಯರಿಗೆ ಭರವಸೆ ನೀಡಿದರು. ಹೊಸಂಗಡಿ ಫ್ಲೈಓವರ್ನಲ್ಲಿ ಅನಧಿಕೃತ ಪಾರ್ಕಿಂಗ್, ಹೊಸಂಗಡಿ ಕಡಂಬಾರು ರಸ್ತೆಯ ಇಕ್ಕಡೆಗಳಲ್ಲಿ ಅನಧಿಕೃತ ವ್ಯಾಪಾರ ನಡೆಸುತ್ತಿರುವವರಿಗೂ ತಾಕೀತು ನೀಡಲಾಯಿತು.