ಹೊಸ ವರ್ಷಾಚರಣೆ: ಜಿಲ್ಲೆಯಾದ್ಯಂತ ಅಲರ್ಟ್ ಕಂಟ್ರೋಲ್ ರೂಮ್ ಆರಂಭ

ಕಾಸರಗೋಡು: ಹೊಸ ವರ್ಷಾಚರಣೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ  ಜಿಲ್ಲೆಯಾದ್ಯಂತವಾಗಿ ಪೊಲೀಸ್ ಅಲರ್ಟ್ ಘೋಷಿಸಿದ್ದಾರೆ.

ಇದರಂತೆ, ಜಿಲ್ಲೆಯ ಎಲ್ಲಾ ರೈಲು, ಬಸ್ ನಿಲ್ದಾಣಗಳು ಮತ್ತು ಜನನಿಬಿಡ ಕೇಂದ್ರಗಳಲ್ಲಿ ಪೊಲೀಸರು ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳಗಳನ್ನು ಬಳಸಿ ಬಿಗಿ ತಪಾಸಣೆ ಆರಂಭಿಸಿದ್ದಾರೆ. ಮಾತ್ರವಲ್ಲ ಜಿಲ್ಲೆಯ ಎಲ್ಲಾ ವಸತಿ ಗೃಹಗಳಿಗೂ ಪೊಲೀಸ್ ದಾಳಿ ನಡೆಸತೊಡಗಿದ್ದಾರೆ. ಅಲ್ಲಿ ಶಂಕಿತರು ತಂಗಿದ್ದಲ್ಲಿ ಅವರನ್ನು ವಶಕ್ಕೆ ತೆಗೆದು ವಿಚಾರಿಸಲಾಗುವುದು.

ಹೊಸ ವರ್ಷಾಚರಣೆಗೆ ದಶಂಬರ್ ೩೧ರಂದು ರಾತ್ರಿ ೧೦ ಗಂಟೆ ತನಕ ಮಾತ್ರವೇ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗುವುದು. ಈ ನಿಗದಿತ ಸಮಯದ ಬಳಿಕ ಧ್ವನಿವರ್ಧಕಗಳನ್ನು ಬಳಸಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಒಂದು ಸ್ಥಳದಲ್ಲಿ ಒಂದು ಸಂಘಟನೆಗೆ ಮಾತ್ರವೇ ಹೊಸ ವರ್ಷಾಚರಣೆ ಅನುಮತಿ ನೀಡಲಾಗುವುದು. ಆದರೆ ಆಚರಣೆಯ ವೇಳೆ ಯಾರಾದರೂ ಘರ್ಷಣೆಗೆ ಯತ್ನಿಸಿದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾತ್ರವಲ್ಲ ಆಚರಣೆ ಮಿತಿ ಮೀರಿದಲ್ಲಿ ಅಂತಹವರು ಪೊಲೀಸರ ಲಾಠಿ ಪ್ರಹಾರದ ರುಚಿಯನ್ನೂ ಎದುರಿಸಬೇಕಾಗಿ ಬರಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ.

ಇನ್ನೊಂದೆಡೆ ಹೊಸ ವರ್ಷಾಚರಣೆ ಹೆಸರಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಗೆ ವ್ಯಾಪಕ ಅಕ್ರಮ ಮದ್ಯ ಮತ್ತು ಮಾದಕ ದ್ರವ್ಯಗಳು ಹರಿದು ಬರತೊಡಗಿದ್ದು, ಅದನ್ನು ತಡೆಗಟ್ಟಲು  ಪೊಲೀಸರು ಮತ್ತು ಅಬಕಾರಿ ಇಲಾಖೆ ಜಿಲ್ಲೆಯಲ್ಲಿ ದೈನಂದಿನ ೨೪ ತಾಸುಗಳ ತನಕದಲ್ಲಿ ಕಾರ್ಯವೆಸಗುವ ಕಂಟ್ರೋಲ್ ರೂಮ್‌ಗಳನ್ನು ಆರಂಭಿಸಿವೆ. ಮದ್ಯ – ಮಾದಕ ದ್ರವ್ಯ ಹರಿವಿನ ಬಗ್ಗೆ ಜನರು ಇಂತಹ ಕಂಟ್ರೋಲ್ ರೂಮ್‌ಗೆ ಕರೆದು ಮಾಹಿತಿ ನೀಡಬಹುದು. ಹೀಗೆ ಮಾಹಿತಿ ನೀಡುವವರ ಹೆಸರನ್ನು ಗುಪ್ತವಾಗಿ ಇರಿಸಲಾಗುವುದೆಂದು ಪೊಲೀಸರು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಅಬಕಾರಿ ಮತ್ತು ಮಾದಕ ದ್ರವ್ಯ ಸಾಗಾಟ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಎಲ್ಲರ ಮೇಲೂ ಪೊಲೀಸರು ತೀವ್ರ ನಿಗಾ ಇರಿಸತೊಡಗಿದ್ದಾರೆ. ಇನ್ನೊಂದೆಡೆ ಜಿಲ್ಲೆಯಾದ್ಯಂತ ಅದರಲ್ಲೂ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಎಲ್ಲಾ ವಾಹನಗಳನ್ನೂ ಪೊಲೀಸರು ಮತ್ತು ಅಬಕಾರಿ ಇಲಾಖೆ ತೀವ್ರ ತಪಾಸಣೆ ನಡೆಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page