ಹೋಟೆಲ್ಗೆ ನುಗ್ಗಿ ಬೆದರಿಕೆ, ಮಾನ ಹಾನಿಗೆ ಯತ್ನಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ
ಕಾಸರಗೋಡು: ಹೋಟೆಲ್ಗೆ ನುಗ್ಗಿ ಅದರ ಮಾಲಕನ ಪತ್ನಿಗೆ ಕೊಲೆ ಬೆದರಿಕೆ ಒಡ್ಡಿ ಹಾಗೂ ಮಾನ ಹಾನಿಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಚೀಫ್ ಜ್ಯುಡೀಶ್ಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ ಐಪಿಸಿಯ ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು ನಾಲ್ಕೂವರೆ ವರ್ಷ ಸಜೆ ಮತ್ತು ೩೫,೦೦೦ ರೂ. ಜುಲ್ಮಾನೆ ಹಾಗೂ ೨೫೦೦೦ ರೂ. ನಷ್ಟ ಪರಿಹಾರ ಪಾವತಿಸುವಂತೆ ನಿರ್ದೇಶಿಸಿ ವಿಧಿಸಿ ತೀರ್ಪು ನೀಡಿದೆ.
ಎಡನೀರು ಕೆಮ್ಮಂಗಯದ ಶಿವ ಅಲಿಯಾಸ್ ಶಿವಪ್ರಸಾದ್ (೩೪) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ೨೦೧೮ ಜೂನ್ ೧೩ರಂದು ಎಡನೀರಿನ ಹೋಟೆಲೊಂದಕ್ಕೆ ಅಕ್ರಮವಾಗಿ ನುಗ್ಗಿ ಅದರ ಮಾಲಕನ ಪತ್ನಿಗೆ ಬೆದರಿಕೆ ಒಡ್ಡಿ ಮಾನಹಾನಿಗೈಯ್ಯಲೆತ್ನಿಸಿದ ದೂರಿನಂತೆ ವಿದ್ಯಾನಗರ ಪೊಲೀಸರು ಆರೋಪಿ ಶಿವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಎಸ್ಐ ಆಗಿದ್ದ ಯು.ಪಿ. ವಿಪಿನ್ ಅವರು ಈ ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಇನ್ಸ್ಪೆಕ್ಟರ್ ಆಗಿದ್ದ ಇ. ಅನೂಪ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದೂ, ಜುಲ್ಮಾನೆ ಪಾವತಿಸದಿದ್ದಲ್ಲಿ, ಆರೋಪಿ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಡೆಪ್ಯುಟಿ ಡೈರೆಕ್ಟರ್ ಆಫ್ ಪ್ರೋಸಿಕ್ಯೂಷನ್ ಬಿ. ನಿಷಾ ಕುಮಾರಿ ನ್ಯಾಯಾಲಯದಲ್ಲಿ ವಾದಿಸಿದ್ದರು.