೧.೫ ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ: ಕಾಸರಗೋಡು ನಿವಾಸಿಯೂ ಸೇರಿದಂತೆ ನಾಲ್ವರು ವಶಕ್ಕೆ
ಕಾಸರಗೋಡು: ಕಲ್ಲಿಕೋಟೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಕಳ್ಳಸಾಗಾಟ ಮೂಲಕ ತರಲಾದ ೧.೫ ಕೋಟಿ ರೂ. ಮೌಲ್ಯದ ಒಟ್ಟು ೩.೪೨೦ ಕಿಲೋ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ನಿಜಾಮುದ್ದೀನ್ (೩೨), ಬಾಲಶ್ಶೇರಿ ನಿವಾಸಿ ಇ.ಎಂ. ಅಬು ನೌಫಿನ್ (೩೬), ತೇನಿಪಾಲದ ಸಜ್ಜಾದ್ ಕಾಮಿನ್ (೨೬) ಮತ್ತು ಮಲಪ್ಪುರ ಎಡಕ್ಕರದ ಸಿ.ಕೆ. ಪ್ರಜಿನ್ (೨೩) ಎಂಬವರನ್ನು ಕಸ್ಟಮ್ಸ್ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ನಾಲ್ವರ ಪೈಕಿ ನಿಜಾಮುದ್ದೀನ್ ಅಬುದಾಬಿಯಿಂದ ವಿಮಾನದಲ್ಲಿ ಬಂದಿಳಿದಿದ್ದನು. ಕಸ್ಟಮ್ಸ್ ತಂಡ ಆತನನ್ನು ತಪಾಸಣೆಗೊಳ ಪಡಿಸಿದಾಗ ಆತನ ಬ್ಯಾಗ್ನಲ್ಲಿದ್ದ ಪರ್ಫ್ಯೂಮ್ ಬಾಟಲಿಯೊಳಗೆ ಚಿನ್ನದ ಪುಡಿ ಬಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಬು ನೌಫಿನ್ ದುಬಾಯಿಯಿಂದ ಬಂದಿಳಿದಿದ್ದನು. ಆತನನ್ನು ಕಸ್ಟಮ್ಸ್ ತಂಡ ತಪಾಸಣೆಗೊಳಪಡಿಸಿದಾಗ ದೇಹದ ಗುಪ್ತಭಾಗದಲ್ಲಿ ಬಚ್ಚಿಡಲಾಗಿದ್ದ ೧೦೯೭ ಗ್ರಾಂ ಚಿನ್ನ ಪತ್ತೆಯಾಗಿದೆ. ಇಂಡಿಗೋ ವಿಮಾನದಲ್ಲಿ ಬಂದಿಳಿಸಿದ ಸಜಾದ್ ಕಾಮಿಲ್ನಿಂದ ೭೪೯ ಗ್ರಾಂ ಚಿನ್ನ ಹಾಗೂ ರಿಯಾದ್ ನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಪ್ರಜಿನ್ನಿಂದ ೧೨೭೫ ಗ್ರಾಂ ಚಿನ್ನ ಪತ್ತೆಯಾಗಿದೆ. ಅದನ್ನು ಆತ ದೇಹದ ಗುಪ್ತಭಾಗದಲ್ಲಿ ಬಚ್ಚಿಟ್ಟಿದ್ದನೆಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಈ ನಾಲ್ವರನ್ನು ಕಸ್ಟಮ್ಸ್ ಅಧಿಕಾರಿಗಳು ತೀವ್ರ ತಪಾಸಣೆ ಗೊಳಪಡಿಸಿದ್ದಾರೆ.