೨೩.೫ ಪವನ್ ಚಿನ್ನಾಭರಣ ಕಳವು : ಕಳ್ಳರ ಸುಳಿವು ಇನ್ನೂ ಅಲಭ್ಯ
ಬದಿಯಡ್ಕ: ಮನೆ ಮಂದಿ ಉತ್ಸವಕ್ಕೆ ತೆರಳಿದ್ದ ವೇಳೆ ಮನೆಯಿಂದ ೨೩.೫ ಪವನ್ ಚಿನ್ನಾಭರಣವನ್ನು ಕಳವುಗೈದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರಂಗವಾಗಿ ಹಲವರನ್ನು ತನಿಖಾ ತಂಡ ವಿಚಾರಣೆ ನಡೆಸಿದೆ. ಆದರೆ ಕಳವಿನ ಬಗ್ಗೆ ಬೆಳಕು ಚೆಲ್ಲುವ ಯಾವುದೇ ಸೂಚನೆಗಳು ಲಭಿಸಿಲ್ಲವೆನ್ನಲಾಗಿದೆ.
ಚಿನ್ನಾಭರಣ ಇರಿಸಿದ್ದ ಕಪಾಟಿ ನಿಂದ ಹಾಗೂ ಕೀಲಿಕೈಯಿಂದ ಲಭಿ ಸಿದ ಬೆರಳಚ್ಚುಗಳ ಪರಿಶೀಲನಾ ವರದಿ ಲಭಿಸಿದರೆ ತನಿಖೆಯು ನಿರ್ಣಾಯಕ ಹಂತಕ್ಕೆ ತಲುಪಬಹುದಾಗಿದೆ. ಸೀತಾಂಗೋಳಿ, ಮುಗು, ಕುಂಞಿ ಪದವಿನ ಬಟ್ಟುರೈಯವರ ಮನೆಯಿಂದ ಇತ್ತೀಚೆಗೆ ಹಾಡಹಗಲು ಕಳವು ನಡೆದಿತ್ತು. ಮನೆಯವರೆಲ್ಲಾ ಸಮೀಪದ ಕ್ಷೇತ್ರದ ಉತ್ಸವದಲ್ಲಿ ಭಾಗವಹಿಸಲೆಂದು ತೆರಳಿದಾಗ ಕಳವು ನಡೆದಿದೆ. ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕಪಾಟಿನ ಮೇಲ್ಭಾಗದಲ್ಲಿದ್ದ ಕೀಲಿಯನ್ನು ತೆಗೆದು ಚಿನ್ನಾಭರಣಗಳನ್ನು ಕಳವುಗೈಯ್ಯ ಲಾಗಿದೆ. ಬಟ್ಟು ರೈಯವರ ಪುತ್ರ ಮಂಜುನಾಥರ ಆಭರಣಗಳಾಗಿವೆ ಇವು. ಮಂಜುನಾಥರ ಪತ್ನಿ ಸ್ವಾತಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.