೯ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ೪೧ ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಒಂಭತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶರಾದ ಸಿ. ದೀಪು ಅವರು ಪೋಕ್ಸೋ ಹಾಗೂ ಐಪಿಸಿಯ ವಿವಿಧ ಸೆಕ್ಷನ್ಗಳಲ್ಲಾಗಿ ಒಟ್ಟು ೪೧ ವರ್ಷ ಸಜೆ ಹಾಗೂ ೨೧೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಂಬಳೆಗೆ ಸಮೀಪದ ಪೆರ್ಣೆ ಎಡನಾಡಿನ ಗೋಪಾಲಕಷ್ಣ (೬೭) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ತಿಂಗಳು, ಹತ್ತು ದಿನಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೦ ಜೂನ್ ೨೮ರಂದು ಆರೋಪಿಯ ಮನೆ ಬಳಿ ಆಟವಾಡುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು.
ಅಂದು ಕುಂಬಳೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಪಿ. ಪ್ರಮೋದ್ ಈ ಬಗ್ಗೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪ್ರೋಸಿಕ್ಯೂಟರ್ ಪಿ.ಕೆ. ಪ್ರಿಯಾ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು.