೯೦ ಕಿಲೋ ಗಾಂಜಾ ವಶ ಪ್ರಕರಣ: ಪರಾರಿಯಾದ ಆರೋಪಿ ಬಂಧನ
ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾ ವಶ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಬಣೂರು ನಿವಾಸಿ ಶೇಕ್ ಅಲಿ (೬೯) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈತನನ್ನು ಮಂಜೇಶ್ವರ ಸಿಐ ರಜೀಶ್ ನೇತೃತ್ವದ ಪೊಲೀಸರು ಮನೆಯಿಂದ ಸೆರೆಹಿಡಿದಿದ್ದಾರೆ. ಅಲ್ಲದೆ ಆರೋಪಿಯ ಒಂದು ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯದಲ್ಲಿ ರಿಮಾಂಡ್ ವಿಧಿಸಿದೆ. ೨೦೨೩ ಅಕ್ಟೋಬರ್ ೧೫ ರಂದು ರಾತ್ರಿ ೧೦.೩೦ರ ವೇಳ ಮಂಜೇಶ್ವರ ಪೊಲೀಸರು ಬಾಯಿಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾವನ್ನು ವಶಪಡಿಸಿಕೊಂ ಡಿದ್ದರು. ಈ ಸಂಬಂಧ ಕಣ್ಣೂರು ಕೂತುಪರಂಬ ಕಣ್ಣವಂ ನಿವಾಸಿಯೂ, ತೃಕ್ಕರಿಪುರದಲ್ಲಿ ವಾಸಿಸುವ ರೈಫ್ ಬಷೀರ್ (೩೧) ಎಂಬಾತನ್ನು ಸೆರೆಹಿಡಿಯಲಾಗಿತ್ತು. ಈ ವೇಳೆ ಕಾರಿನಲ್ಲಿದ್ದ ಕುಬಣೂರಿನ ಶೇಕ್ ಅಲಿ ಓಡಿ ಪರಾರಿಯಾಗಿದ್ದನು. ಈತನಿಗಾಗಿ ಪೊಲೀಸರು ತೀವ್ರಶೋಧ ನಡೆಸುತ್ತಿದ್ದರು. ಈ ವೇಳೆ ಆರೋಪಿ ನಿನ್ನೆ ಮನೆಯಲ್ಲಿರುವುದಾಗಿ ಲಭಿಸಿದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಗಾಂಜಾ ಸಾಗಾಟ ಪ್ರಕರಣದಲ್ಲಿ ಸಹಾಯವೊದಗಿಸಿರುವುದು ಈತನಾಗಿದ್ದಾನೆ. ಅಲ್ಲದೆ ಗಾಂಜಾ ಸಾಗಾಟದ ಸೂತ್ರಧಾರನೂ ಈತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತನೊಂದಿಗೆ ಗಾಂಜಾ ಸಾಗಾಟದಲ್ಲಿ ಇನ್ನೂ ಹಲವರು ಭಾಗಿಯಾಗಿರಲು ಸಾಧ್ಯತೆ ಇದೆಯೆಂ ದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಿಮಾಂಡ್ನಲ್ಲಿರುವ ಆರೋಪಿಯನ್ನು ಕಸ್ಟಡಿಗೆ ತೆಗೆದು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.