152 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆ ಚರಂಡಿಯ ಸ್ಲ್ಯಾಬ್ ಕುಸಿದು ಸಿಲುಕಿಕೊಂಡ ಸರಕುಲಾರಿ
ಕುಂಬಳೆ: 152 ಕೋಟಿ ರೂಪಾಯಿ ಖರ್ಚು ಮಾಡಿ ತಿಂಗಳುಗಳ ಹಿಂದೆಯಷ್ಟೇ ನವೀಕರಿಸಿದ ಕುಂಬಳೆ-ಬದಿಯಡ್ಕ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಕುಂಬಳೆಯಲ್ಲಿ ಚರಂಡಿಯ ಸ್ಲ್ಯಾಬ್ ಕುಸಿದು ಸರಕು ಲಾರಿ ಸಿಲುಕಿಕೊಂಡ ಘಟನೆ ನಡೆದಿದೆ. ನಿನ್ನೆ ಸಂಜೆ ಮಂಗಳೂರಿನಿಂದ ಕೊಚ್ಚಿಗೆ ಪಾಮ್ ಆಯಿಲ್ ಸಾಗಿಸುತ್ತಿದ್ದ ಲಾರಿ ಚರಂಡಿಯ ಸ್ಲ್ಯಾಬ್ ಕುಸಿದು ಸಿಲುಕಿಕೊಂಡಿದೆ. ಚಾಲಕ ಆಹಾರ ಸೇವಿಸಲು ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಲು ಸ್ಥಳವಿಲ್ಲದು ದರಿಂದ ಕುಂಬಳೆಯ ಬದಿಯಡ್ಕ ರಸ್ತೆ ಬದಿ ನಿಲುಗಡೆಗೊಳಿಸಲು ಪ್ರಯತ್ನಿಸಿದ್ದನು. ಇತರ ವಾಹನಗಳಿಗೆ ಅಡಚಣೆ ಉಂಟಾಗದ ರೀತಿಯಲ್ಲಿ ಲಾರಿಯನ್ನು ಬದಿಗೆ ಸರಿಸಿ ನಿಲ್ಲಿಸಿದಾಗ ಲಾರಿಯ ಟಯರ್ ಸ್ಲ್ಯಾಬ್‌ನೊಳಗೆ ಹೂತು ಹೋಗಿದೆ. ಬಳಿಕ ರಾತ್ರಿ ವೇಳೆ ಕ್ರೇನ್ ತಲುಪಿಸಿ ಲಾರಿಯನ್ನು ಮೇಲಕ್ಕೆತ್ತಲಾಯಿತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆ ಹಾಗೂ ಚರಂಡಿಯ ಗುಣಮಟ್ಟ ಕಳಪೆಯಾಗಿರುವುದು ನಾಡಿನಲ್ಲಿ ವ್ಯಾಪಕ ಚರ್ಚೆಗೆಡೆಯಾಗಿದೆ.