16 ಕಿಲೋ ಮೀಟರ್‌ನಲ್ಲಿ 17 ಹಂಪ್: ವಾಹನ ಸವಾರರಿಗೆ ಆತಂಕ
ಉಪ್ಪಳ: ಕೈಕಂಬ- ಬಾಯಾರು ರಸ್ತೆಯಲ್ಲಿ ಅಲ್ಲಲ್ಲಿ ಹಂಪ್‌ಗಳನ್ನು ನಿರ್ಮಿಸಿರುವುದು ವಾಹನ ಸವಾರರಿಗೆ ಸಮಸ್ಯೆ ಉಂಟುಮಾಡುತ್ತಿದೆ ಎಂದು ದೂರಲಾಗಿದೆ. ರಸ್ತೆಯನ್ನು ಮರು ಡಾಮರೀಕರಣಗೊಳಿಸಿದ ಬಳಿಕ ಕೈಕಂಬದಿಂದ ಮುಳಿಗದ್ದೆ ತನಕದ 16 ಕಿಲೋ ಮೀಟರ್ ದೂರದಲ್ಲಿ 17ರಷ್ಟು ಹಂಪ್‌ಗಳನ್ನು ನಿರ್ಮಿಸಿರುವುದರಿಂದಾಗಿ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಹಿಂದೆ ಅಪಘಾತ ನಡೆಯುತ್ತಿದ್ದ ಸ್ಥಳವನ್ನು ಗುರುತಿಸಿ ಹಂಪ್ ಅಳವಡಿಸಲಾಗಿತ್ತು. ಆದರೆ ಈಗ ಎಲ್ಲಾ ಕಡೆಗಳಲ್ಲೂ ಬೇಕಾಬಿಟ್ಟಿ ಹಂಪ್ ನಿರ್ಮಿಸಿರುವುದರಿಂದಾಗಿ ವಾಹನಗಳಿಗೆ ಸಂಚರಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ. ಏರು, ಇಳಿಜಾರು ಪ್ರದೇಶಗಳಲ್ಲೂ ಕೂಡಾ ಹಂಪ್ ನಿರ್ಮಿಸಿರುವುದರಿಂದಾಗಿ ವಾಹನ ಚಲಾಯಿಸಲು ಕಷ್ಟವಾಗುತ್ತಿದೆ. ರಾತ್ರಿ ಹೊತ್ತಲ್ಲಿ ಹಂಪ್ ಗಮನಕ್ಕೆ ಬಾರದೆ ಕೆಲವೊಮ್ಮೆ ಅಪಘಾತವೂ ಸಂಭವಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಗತ್ಯವಿರುವ ಸ್ಥಳದಲ್ಲಿ ಮಾತ್ರ ಹಂಪ್ ಇರಿಸಿಕೊಂಡು ಉಳಿದವುಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕೆಂದು ಆಗ್ರಹ ಮೂಡಿಬಂದಿದೆ.