ಕಾಸರಗೋಡು: ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಐದು ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವಾದ ಚರಸ್ಸ್ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನೀಲೇಶ್ವರ ಚಿರಪುರತ್ ನಿವಾಸಿ ವೆಳ್ಳಿಕ್ಕೋತ್ ಮುಹಮ್ಮದ್ ಸಿರಾಜುದ್ದೀನ್ (25) ಬಂಧಿತ ಆರೋಪಿ.
ಎರ್ನಾಕುಳಂ ನೆಡುಂಬಾಶ್ಶೇರಿಯ ಹೋಟೆಲೊಂದರಲ್ಲಿ ಮೊಹಮ್ಮದ್ ಸಿರಾಜುದ್ದೀನ್ ಬಾಡಿಗೆ ಕೊಠಡಿ ಪಡೆದುಕೊಂಡಿದ್ದನು. ಆತ ಮಾದಕ ದ್ರವ್ಯ ಸಾಗಿಸುತ್ತಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿದ ನೆಡುಂಬಾಶ್ಶೇರಿ ಪೊಲೀಸರು ಮತ್ತು ಡ್ಯಾನ್ಸಾಪ್ ತಂಡ ಜಂಟಿಯಾಗಿ ಹೋಟೆಲ್ನಲ್ಲಿ ನಿನ್ನೆ ನಡೆಸಿದ ಪರಿಶೀಲನೆಯಲ್ಲಿ ಆರೋಪಿ ತಂಗಿದ್ದ ಕೊಠಡಿಯಿಂದ ಎರಡುವರೆ ಕಿಲೋ ಚರಸ್ ಪತ್ತೆಯಾಗಿದೆ.
ಈ ಮಾಲನ್ನು ಆತ ದೆಹಲಿಯಿಂದ ಖರೀದಿಸಿದ್ದನೆಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅಲ್ಲಿಂದ ಮಂಗಳೂರಿನ ತನಕ ವಿಮಾನದಲ್ಲಿ ಬಂದಿದ್ದನು. ನಂತರ ಅಲ್ಲಿಂದ ರೈಲಿನಲ್ಲಿ ತೃಶೂರಿಗೆ ಬಂದು ಟಾಕ್ಸಿ ವಾಹನದಲ್ಲಿ ನೆಡುಂಬಾಶೇರಿಗೆ ತಲುಪಿ ಅಲ್ಲಿನ ಹೋಟೆಲೊಂದರಲ್ಲಿ ಕೊಠಡಿ ಪಡೆದುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಗಿಡಗಳ ಹೂಗಳಿಂದ ಹಾಗೂ ಅದರ ಎಲೆಗಳಲ್ಲಿ ಕಾಣಸಿಗುವ ಲವಣಗಳನ್ನು ಪ್ರತ್ಯೇಕಿಸಿ ತೆಗೆದು ಅದನ್ನು ಉಪಯೋಗಿಸಿ ಅತ್ಯಾಧುನಿಕ ರೀತಿಯ ಹಾಗೂ ಅತೀವ ಮಾದಕತೆ ಹೊಂದಿರುವ ಈ ಚರಸ್ಸನ್ನು ತಯಾರಿಸಲಾಗಿದೆ. ಅದನ್ನು ಸಣ್ಣ ಪ್ಯಾಕೇಜ್ಗಳಲ್ಲಿ ತುಂಬಿಸಿ ಆರೋಪಿ ಬ್ಯಾಗ್ನಲ್ಲಿ ಬಚ್ಚಿಟ್ಟಿದ್ದನು. ಈ ಮಾದಕ ದ್ರವ್ಯವನ್ನು ಆತ ನೆಡುಂಬಾಶ್ಶೇರಿಯಿಂದ ಕೊಚ್ಚಿ ನಗರಕ್ಕೆ ತಲುಪಿಸಿ ಅದನ್ನು ಮಾದಕ ದ್ರವ್ಯ ಮಾರಾಟಗಾರರಿಗೆ ವಿತರಿಸುವ ಯೋಜನೆ ಹಾಕಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಇದು ಮಾತ್ರವಲ್ಲ ಆತ ಈ ಹಿಂದೆಯೂ ಇದೇ ರೀತಿ ಮಾದಕದ್ರವ್ಯ ಸಾಗಿಸಿದ್ದನೆಂಬ ಮಾಹಿತಿಯೂ ಲಭಿಸಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ನೆಡುಂಬಾಶ್ಶೇರಿ ಪೊಲೀಸರು ಕಾಸರಗೋಡಿಗೂ ವಿಸ್ತರಿಸಿದ್ದಾರೆ. ಆರೋಪಿಯ ಮನೆಯಲ್ಲೂ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ಮಾತ್ರವಲ್ಲ ಈ ದಂಧೆಯಲ್ಲಿ ಆತನ ಜತೆಗೆ ಕಾಸರಗೋಡಿನ ಹಲವರು ಶಾಮೀಲಾಗಿದ್ದಾರೆಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲೂ ಪೊಲೀಸರು ತೊಡಗಿದ್ದಾರೆ.







