ವ್ಯಾಪಾರದ ಮರೆಯಲ್ಲಿ ಹಲವರಿಂದ ಕೋಟಿಗಟ್ಟಲೆ ರೂ. ಪಡೆದು ಪಂಗನಾಮ: ತಲೆಮರೆಸಿಕೊಂಡಿದ್ದ ಮಹಿಳೆ ಕೊಲ್ಲಂನಿಂದ ಸೆರೆ

ಕಾಸರಗೋಡು: ಸಿದ್ದ ಉಡುಪುಗಳಲ್ಲಿ ಜವುಳಿ ಇತ್ಯಾದಿ ಸಾಮಗ್ರಿಗಳ ವ್ಯಾಪಾರದ ಹೆಸರಲ್ಲಿ ಹಲವರಿಂದ ಕೋಟಿಗಟ್ಟಲೆ ರೂಪಾಯಿ ಪಡೆದ ಬಳಿಕ ಪ್ರಕರಣದ ಆರೋಪಿಯಾಗಿದ್ದು ನಂತರ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಕೊಲ್ಲಂನಿಂದ ಪೊಲೀಸರು ಸೆರೆ ಹಿಡಿದಿದ್ದಾರೆ.

ಹೊಸದುರ್ಗ ನೆಲ್ಲಿಕಾಟ್‌ನಲ್ಲಿ ವಾಸಿಸುತ್ತಿದ್ದ ನಫೀಸಾ (62) ಬಂಧಿತಳಾದ ಆರೋಪಿ. ಬಟ್ಟೆ ವ್ಯಾಪಾರದ ಹೆಸರಲ್ಲಿ ಈಕೆ ಹಲವರಿಂದಾಗಿ ಕೋಟಿಗಟ್ಟಲೆ ರೂಪಾಯಿ ಪಡೆದು ವಂಚಿಸಿದ ಪ್ರಕರಣದ ಆರೋಪಿ ಮಾತ್ರವಲ್ಲದೆ ಈಕೆಯ ವಿರುದ್ಧ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹತ್ತರಷ್ಟು ಅಮಾನ್ಯ ಬ್ಯಾಂಕ್ ಚೆಕ್ ಪ್ರಕರಣಗಳೂ ಇವೆ. ನಂತರ ಆಕೆ ತಲೆಮರೆಸಿಕೊಂಡಿದ್ದಳು. ಆಕೆಯ ಬಂಧನಕ್ಕಾಗಿ ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ವಾರೆಂಟ್ ಜ್ಯಾರಿಗೊಳಿಸಿತ್ತು. ಕೋಟಿಗಟ್ಟಲೆ ರೂಪಾಯಿ ಪಡೆದು ವಂಚಿಸಿದ ಬಳಿಕ ಆಕೆ ಕೊಲ್ಲಂನಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದಳು. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಹೊಸದುರ್ಗ ಡಿವೈಎಸ್‌ಪಿಯವರ ನೇತೃತ್ವದ ಪೊಲೀಸರ ತಂಡ ಕೊಲ್ಲಂಗೆ ಸಾಗಿ ಅಲ್ಲಿಂದ ಆಕೆಯನ್ನು ಬಂಧಿಸುವಲ್ಲಿ ಸಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಇತರ ಹಲವು ಜಿಲ್ಲೆಗಳಲ್ಲಿ ಇದೇ ರೀತಿ ಆರ್ಥಿಕ ವಂಚನೆ ನಡೆಸಿದ ಪ್ರಕರಣ ದಲ್ಲೂ ಬಂಧಿತಳು ಆರೋಪಿಯಾಗಿದ್ದಾಳೆ.  ಅದಕ್ಕೆ ಸಂಬಂಧಿಸಿ ಆಕೆಯ ವಿರುದ್ಧ ಹಲವು ವಾರೆಂಟ್‌ಗಳೂ ಇವೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page