ಕಾಸರಗೋಡು: ಕನ್ನಡ ಗ್ರಾಮದಲ್ಲಿ ನಾಳೆ, 29ರಂದು ನಡೆಯುವ ಕೇರಳ ರಾಜ್ಯ ೮ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ, ಮಕ್ಕಳ ಸಾಹಿತ್ಯ ಉತ್ಸವ, ಕೇರಳ- ಕರ್ನಾಟಕ ಭವನದ ಭೂಮಿಪೂಜೆ ಶಿಲಾನ್ಯಾಸ, ಕಾಸರಗೋಡು ಗೋಕುಟೀರದ ಪ್ರವೇಶೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರ್ನಾಟಕದ ಗಣ್ಯರಾದ ವೀರಪ್ಪ ಮೊಯ್ಲಿ, ವಾಟಾಳ್ ನಾಗರಾಜ್, ಸಚಿವ ಯು.ಟಿ. ಖಾದರ್, ಡಾ. ಶಿವಾನಂದ ಕೆಳಗಿನಮನೆ ಜಿಲ್ಲೆಗೆ ವಿವಿಧ ದಿನಗಳಲ್ಲಾಗಿ ತಲುಪಲಿದ್ದಾರೆ. ನಾಳೆ ನಡೆಯುವ ಕೇರಳ-ಕರ್ನಾಟಕ ಉತ್ಸವ ಉದ್ಘಾಟನೆ ಕಾರ್ಯಕ್ರಮ ದಲ್ಲಿ ವಾಟಾಳ್ ನಾಗರಾಜ್, ಯು.ಟಿ. ಖಾದರ್, ಜೆ. ಕೃಷ್ಣ ಪಾಲೆಮಾರ್, ಡಾ. ಶಿವಾನಂದ ಕೆಳಗಿನಮನೆ ಸಹಿತ ಹಲವರು ಭಾಗವಹಿಸುವರು. ೨೯ರಂದು ಅಪರಾಹ್ನ ೩ಗಂಟೆಗೆ ಜರಗುವ ಸಮಾರೋಪ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಭಾಗವಹಿಸುವರು. ಜಿಲ್ಲೆಯ ಹಾಗೂ ಕರ್ನಾಟಕದ ವಿವಿಧ ಗಣ್ಯರು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುವರು.







