50ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆರೋಪಿಗಳಾದ ಇಬ್ಬರು ಸೆರೆ
ಕಣ್ಣೂರು: ವಿಗ್ರಹ, ಚಿನ್ನ, ಹಣ, ರಬ್ಬರ್ ಶೀಟ್ ಸಹಿತ 50ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆರೋಪಿಯಾದ ಇಬ್ಬರನ್ನು ಬಂಧಿಸಲಾಗಿದೆ. ಉಳಿಕ್ಕಲ್ ತೇರ್ಮಲ ನಿವಾಸಿ ಹಾಗೂ ಪಯ್ಯಾವೂರು ವಾದಿಲ್ಮಡದಲ್ಲಿ ವಾಸಿಸುತ್ತಿರುವ ಪಡುವಿಲಾನ್ ಪ್ರಶಾಂತ್ (28), ಎರುವೇಶಿ ಅರಿಕಾಮಲ ಬಿಬಿನ್ ಕುರ್ಯನ್(32) ಎಂಬಿವರನ್ನು ಉಳಿಕ್ಕಲ್ ಎಸ್ಐ ಸುರೇಶ್ ಹಾಗೂ ತಂಡ ಬಂಧಿಸಿದೆ. ಈ ತಿಂಗಳ 7ರಂದು ಪುಳಂಙರಕಂಡಿ ಮುನ್ಸೀರರ ಮನೆಯಂಗಳದಲ್ಲಿ ಒಣಗಲು ಹಾಕಿದ್ದ 80 ರಬ್ಬರ್ ಶೀಟ್ಗಳನ್ನು ಕಳವುಗೈದ ಪ್ರಕರಣದಲ್ಲಿ ಈಗ ಸೆರೆಹಿಡಿಯಲಾಗಿದೆ. ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಕಣ್ಣೂರು ಜಿಲ್ಲೆಯ ಹೆಚ್ಚಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರಶಾಂತ್ ವಿರುದ್ಧ ಕಳವು ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿ ಪ್ರಶಾಂತ್ ಹಾಗೂ ಬಿಬಿನ್ ಪರಿಚಯಗೊಂಡಿದ್ದು, ಜೈಲಿನಿಂದ ಹೊರಬಂದಬಳಿಕ ಇವರಿಬ್ಬರು ಸೇರಿ ಹಗಲು ಹೊತ್ತಿನಲ್ಲಿ ಸ್ಕೂಟಿಯಲ್ಲಿ ಸಂಚರಿಸ ಕಳವು ನಡೆಸುವ ಮನೆಯನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿದ ಬಳಿಕ ಕಳವು ನಡೆಸುತ್ತಿರುವುದು ಇವರ ರೀತಿಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.