ವರ್ಕಾಡಿ ಪಂಚಾಯತ್‌ನಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು-ಮುಸ್ಲಿಂ ಲೀಗ್
ವರ್ಕಾಡಿ: ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ವ್ಯಾಪಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ನೀರಿನ ಮೂಲಗಳನ್ನು ಪತ್ತೆಹಚ್ಚಿ ನೀರು ವಿತರಣೆ ನಡೆಸಿ ಸಮಸ್ಯೆ ಪರಿಹರಿಸಬೇಕೆಂದು ಮುಸ್ಲಿಂ ಲೀಗ್ ಸಭೆ ಒತ್ತಾಯಿಸಿದೆ. ಪಂಚಾಯತ್‌ನ 16 ವಾರ್ಡ್‌ಗಳ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. 2021ರಿಂದ 24ರ ವರೆಗಿನ ವರ್ಷಗಳಲ್ಲಿ ಹಲವು ಕಡಿಯುವ ನೀರು ಯೋಜನೆಗಳಿದ್ದರೂ ಅವುಗಳನ್ನು ಗ್ರಾಮ ಪಂಚಾಯತ್ ಜ್ಯಾರಿಗೊಳಿಸಿಲ್ಲ. ಚೆರ್ಕಳಂ ಅಬ್ದುಲ್ಲ ಸಚಿವರಾಗಿದ್ದಾಗ ಜ್ಯಾರಿಗೊಳಿಸಿದ ಆನೆಕಲ್ಲು ಕುಡಿಯುವ ನೀರು ಯೋಜನೆ ಇದುವರೆಗೆ ಜಲಜೀವನ್ ಮಿಶನ್ ಯೋಜನೆಗೆ ಸಂಪರ್ಕಿಸಲು ಅಥವಾ ಜನರಿಗೆ ತಲುಪಿಸಲು ಸಾಧ್ಯವಾಗಲಿಲ್ಲ. ಜಲ ಅಥೋರಿಟಿ ಅಧಿಕಾರಿಗಳ ಹಾಗೂ ಫಲಾನುಭವಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲು ಪಂಚಾಯತ್‌ನೊಂದಿಗೆ ಆಗ್ರಹಪಟ್ಟಿದ್ದರೂ ಇದುವರೆಗೆ ಅದಕ್ಕೆ ಬೇಕಾದ ಕ್ರಮ ಕೈಗೊಂಡಿಲ್ಲವೆಂದು ಸಭೆ ಆರೋಪಿಸಿದೆ. ಮುಹಮ್ಮದ್ ಪಾವೂರು ಅಧ್ಯಕ್ಷತೆ ವಹಿಸಿದರು. ಮಂಡಲ ಮುಸ್ಲಿಂ ಲೀಗ್ ಅಧ್ಯಕ್ಷ ಅಸೀಸ್ ಹಾಜಿ ಮರಿಕ್ಕೆ ಉದ್ಘಾಟಿಸಿದರು. ಮಂಡಲ ಕೋಶಾಧಿಕಾರಿ ಸೈಫುಲ್ಲ ತಂಙಳ್, ಉಪಾಧ್ಯಕ್ಷರಾದ ಅಬ್ದುಲ್ಲ ಮಾದೇರಿ, ಮೂಸ ಹಾಜಿ ತೋಕೆ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಿ.ಎ. ಅಬ್ದುಲ್ ಮಜೀದ್ ಸ್ವಾಗತಿಸಿ, ಕಾರ್ಯದರ್ಶಿ ಅಹಮ್ಮದ್ ಕುಂಞಿ ಕಜೆ ವಂದಿಸಿದರು. ಸಭೆಯಲ್ಲಿ ಪವಿತ್ರ ಹಜ್‌ಗೆ ತೆರಳುವ ಮುಸ್ಲಿಂ ಲೀಗ್ ನೇತಾರ ಪಿ.ಬಿ. ಅಬೂಬಕ್ಕರ್ ಪಾತೂರು ಹಾಗೂ ಪಂಚಾಯತ್ ವ್ಯಾಪ್ತಿಯ ಇತರ ಕಾರ್ಯಕರ್ತರಿಗೆ ಬೀಳ್ಕೊಡುಗೆ ನೀಡಲು ತೀರ್ಮಾನಿಸ ಲಾಯಿತು. ಪೋಷಕ ಸಂಘಟನೆಯನ್ನು ಬಲಗೊಳಿಸಲು ಮೇ ೩೧ರಂದು ಗಾಂಧಿನಗರ ಎಎಚ್ ಪ್ಯಾಲೆಸ್‌ನಲ್ಲಿ ಸಂಯುಕ್ತ ಸಮಾವೇಶ ನಡೆಸಲು ತೀರ್ಮಾನಿಸ ಲಾಯಿತು. ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್‌ರ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ ಪಂಚಾಯತ್ ಸಮಿತಿ ಕೃತಜ್ಞತೆ ಸಲ್ಲಿಸಿತು. ಪಂಚಾಯತ್ ಪದಾಧಿಕಾರಿಗಳಾದ ಉಮ್ಮರಬ್ಬ ಆನೆಕಲ್ಲು, ಇಬ್ರಾಹಿಂ ಕಜೆ, ಮೂಸ ಕೆದುಂಬಾಡಿ, ಭಾವ ಹಾಜಿ, ವಿ.ಎಸ್. ಮುಹಮ್ಮದ್, ಪೋಷಕ ಸಂಘಟನೆ ಪದಾಧಿಕಾರಿಗಳಾದ ಹಾರಿಸ್ ಪಾವೂರು, ಮನ್ಸೂರ್ ಕೋಡಿ, ಬದ್ರುದ್ದೀನ್ ಪಾವೂರು, ಪಂಚಾಯತ್ ಸದಸ್ಯ ಇಬ್ರಾಹಿಂ ಧರ್ಮನಗರ ಸಭೆಯಲ್ಲಿ ಭಾಗವಹಿಸಿದರು.