ಆನ್‌ಲೈನ್ ಆರ್ಥಿಕ ವಂಚನೆ ಬಗ್ಗೆ ರೆಸಿಡೆಂಟ್ಸ್ ಅಸೋಸಿಯೇಶನ್ ನಿಗಾ ವಹಿಸಲು ಪೊಲೀಸ್ ವರಿಷ್ಠಾಧಿಕಾರಿ ಕರೆ
ಕಾಸರಗೋಡು: ಆನ್‌ಲೈನ್ ಆರ್ಥಿಕ ವಂಚನೆ ವಿರುದ್ಧ ರೆಸಿಡೆಂಟ್ಸ್ ಅಸೋಸಿಯೇಶನ್‌ಗಳು ಹೆಚ್ಚು ನಿಗಾ ವಹಿಸಬೇಕೆಂದು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ವಿನಂತಿಸಿದರು. ವ್ಯಾಪಕಗೊಳ್ಳುವ ಆನ್‌ಲೈನ್ ವಂಚನೆ ವಿರುದ್ಧ ಹೊಣೆಗಾರಿಕೆ ಹಾಗೂ ತಿಳುವಳಿಕೆ ಮೂಡಿಸಲು ಸಂಘಟನೆ ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು. ಪೊಲೀಸರು ನಡೆಸಿದ ಫ್ರಾಕ್ ಪದಾಧಿಕಾರಿಗಳ ಹಾಗೂ ಜಿಲ್ಲೆಯ ರೆಸಿಡೆನ್ಸ್ ಅಸೋಸಿಯೇಶನ್ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಆನ್‌ಲೈನ್ ವಂಚನೆಯಲ್ಲಿ ಒಳಗೊಂಡವರ ಮಾಹಿತಿಯನ್ನು ಒಂದು ಗಂಟೆಯೊಳಗೆ 1930 ಎಂಬ ನಂಬ್ರಕ್ಕೆ ಕರೆ ಮಾಡಿ ತಿಳಿಸಿದರೆ ಕಳೆದುಕೊಂಡ ಹಣವನ್ನು ಹಿಂಪಡೆಯುವುದಕ್ಕೆ ಸಹಾಯಕವಾ ಗುವುದೆಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಮಳೆಗಾಲದಲ್ಲಿ ಕಳ್ಳರ ಬಗ್ಗೆ ಗಮನ ಹರಿಸಬೇಕು, ಮನೆ ಮುಚ್ಚಿ ತೆರಳುವಾಗ ನೆರೆಮನೆಯವರಲ್ಲಿ ಮಾಹಿತಿ ತಿಳಿಸುವ ರೀತಿ ಮುಂದುವರಿಯಬೇಕು, ಶಂಕೆ ತೋರುವ ಯಾರನ್ನೇ ಕಂಡರೂ ಪೊಲೀಸರಿಗೆ ಮಾಹಿತಿ ನೀಡಬೇಕು, ಮಾದಕ ಪದಾರ್ಥ ವಿರುದ್ಧ ತರಗತಿಗಳನ್ನು ಎಲ್ಲಾ ರೆಸಿಡೆನ್ಸ್ ಅಸೋಸಿಯೇಶನ್‌ಗಳೂ ನಡೆಸಬೇಕು, ಅಸೋಸಿಯೇಶನ್ ಪದಾಧಿಕಾರಿಗಳ ಹೆಸರು, ಫೋನ್ ನಂಬ್ರಗಳನ್ನು ಆಯಾ ಠಾಣೆಗಳಲ್ಲಿ ನೀಡಬೇಕು, ಎಲ್ಲಾ ರೆಸಿಡೆಂಟ್ಸ್ ಅಸೋಸಿಯೇಶನ್‌ಗಳಲ್ಲೂ ಸಿಸಿ ಟಿವಿ ಸ್ಥಾಪಿಸಬೇಕು, ಫಿಟ್‌ನೆಸ್ ಪ್ರಮಾಣಪತ್ರ ಇಲ್ಲದ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು, ವಯಸ್ಸಾದವರ ಬಗ್ಗೆ ತಿಳಿದುಕೊಂಡು ಅವರಲ್ಲಿ ಸ್ನೇಹಪೂರ್ವಕ ವ್ಯವಹರಿಸಬೇಕು, ಇಂಟರ್‌ನೆಟ್‌ನಲ್ಲಿ ಅನಗತ್ಯ ಲಿಂಕ್‌ಗಳಿಗೆ ಕ್ಲಿಕ್ ಮಾಡಬಾರದು, ಮೊದಲಾದ ನಿರ್ದೇಶಗಳನ್ನು ವರಿಷ್ಠಾಧಿಕಾರಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಯ ಛೇಂಬರ್‌ನಲ್ಲಿ ಜರಗಿದ ಸಭೆಯಲ್ಲಿ ಫ್ರಾಕ್ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ರೆಸಿಡೆಂಟ್ಸ್ ಅಸೋಸಿಯೇಶನ್‌ಗಳ ಪ್ರತಿನಿಧಿಗಳು, ಉನ್ನತ ಪೊಲೀಸ್ ಅಧಿಕಾರಿಗಳು, ಜನಮೈತ್ರಿ ಪೊಲೀಸ್ ಭಾಗವಹಿಸಿದರು.