ಪಿಣರಾಯಿ ಸರಕಾರಕ್ಕೆ ಮಲಬಾರ್‌ನೊಂದಿಗೆ ಅಸ್ಪೃಶ್ಯತೆ- ಪಿ.ಕೆ. ಫಿರೋಝ್
ಕಾಸರಗೋಡು: ಪಿಣರಾಯಿ ವಿಜಯನ್‌ರ ನೇತೃತ್ವದಲ್ಲಿರುವ ಎಡರಂಗ ಸರಕಾರ ಯಾವತ್ತೂ ಮಲಬಾರ್‌ನೊಂದಿಗೆ ಅಸ್ಪೃಶ್ಯತೆಯನ್ನು ವ್ಯಕ್ತಪಡಿಸುತ್ತಿದೆ ಎಂದು, ಪ್ಲಸ್‌ವನ್ ಸೀಟ್‌ನ ಕೊರತೆ ಪರಿಹರಿಸುವುದರಲ್ಲಿ ನಿರಂತರ ಮಲಬಾರ್‌ಗೆ ಅವಗಣನೆ ಮಾಡುತ್ತಿರುವುದು ಇದರ ಕೊನೆಯ ಉದಾಹರಣೆಯಾಗಿದೆ ಎಂದು ಮುಸ್ಲಿಂ ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಝ್ ನುಡಿದರು. ಎಸ್‌ಎಸ್‌ಎಲ್‌ಸಿಯ ಬಳಿಕ ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಹತೆ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ಲಸ್‌ವನ್‌ಗೆ ಅವಕಾಶ ಲಭಿಸಲು ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿ ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಕಲೆಕ್ಟರೇಟ್‌ನ ಮುಂಭಾಗ ಆಯೋಜಿಸಿದ ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ೫೦,೦೦೦ದಷ್ಟು ವಿದ್ಯಾರ್ಥಿಗಳು ಮಲಬಾರ್‌ನಲ್ಲಿ ೧೦ನೇತರಗತಿ ಉತ್ತೀರ್ಣರಾಗಿದ್ದು, ಅವರು ಆಗ್ರಹಿಸುವ ವಿಷಯದಲ್ಲಿ ಮುಂದಿನ ಕಲಿಕೆ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಉಂಟಾಗಿ ಲ್ಲವೆಂದು ಅವರು ಆರೋಪಿಸಿದರು.
ಮುಸ್ಲಿಂ ಲೀಗ್ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್ ಸಹಿತ ಹಲವು ಮುಖಂಡರು ಮಾತನಾಡಿದರು.