ರಾಷ್ಟ್ರೀಯ ಹೆದ್ದಾರಿಯ ಅಪಾಯಕರ ಹೊಂಡ, ನೀರು ಸಂಗ್ರಹಕ್ಕೆ ಪರಿಹಾರ ಕಾಣಲು ತುರ್ತು ಕ್ರಮ ಆಗ್ರಹ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ತಲಪಾಡಿಯಿಂದ ಕಾಲಿಕಡವ್‌ವರೆಗೆ ವಿವಿಧ ಪ್ರದೇಶಗಳಲ್ಲಿ ನೀರು ಸಂಗ್ರಹ ಗೊಂಡಿದ್ದು, ದೊಡ್ಡ ಹೊಂಡಗಳು ರೂಪು ಗೊಳ್ಳುವ ಸನ್ನಿವೇಶದಲ್ಲಿ ಅಪಘಾತವನ್ನು ಹೊರತುಪಡಿಸಲು ತುರ್ತು ಕ್ರಮ ಸ್ವೀಕರಿಸಲು ಜಿಲ್ಲಾಧಿಕಾರಿ ಕೆ. ಇಂಬ ಶೇಖರನ್‌ರ ಉಪಸ್ಥಿತಿಯಲ್ಲಿ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಜರಗಿದ ಸಂಸದ, ಶಾಸಕರ ಸಭೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಅಧಿಕಾರಿಗಳಿಗೆ, ನಿರ್ಮಾಣ ಕಂಪೆನಿ ಪ್ರತಿನಿಧಿಗಳಿಗೆ ನಿರ್ದೇಶ ನೀಡಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಸಿ.ಎಚ್. ಕುಂಞಂಬು, ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಇ. ಚಂದ್ರಶೇಖರನ್‌ರ ಪ್ರತಿನಿಧಿ ಕೆ. ಪದ್ಮನಾಭನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನೀಶನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್ ಪುನೀತ್ ಕುಮಾರ್, ನಿರ್ಮಾಣ ಕಂಪೆನಿ ಪ್ರತಿನಿಧಿಗಳು ಭಾಗವಹಿಸಿದರು.
ಅಪಾಯ ಸಾಧ್ಯತೆಗಳಿರುವ ವಲಯಗಳಲ್ಲಿ ಶಾಶ್ವತ ಸುರಕ್ಷಾ ವ್ಯವಸ್ಥೆ ಸಿದ್ಧಪಡಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ದುರಂತ ನಿವಾರಣೆಗೆ ಜಿಲ್ಲಾಡಳಿತದ ನಿರ್ದೇಶಗಳನ್ನು ಪಾಲಿಸದವರ ವಿರುದ್ಧ ತೀವ್ರ ಕ್ರಮ ಉಂಟಾಗಲಿದೆ ಎಂದು ಜಿಲ್ಲಾಧಿಕಾರಿ ನುಡಿದರು. ಚಟ್ಟಂಚಾಲ್, ಚೆರ್ಕಳ ವಲಯದಲ್ಲಿ ಗುಡ್ಡೆ ಕುಸಿತ ಅಪಾಯ ಬೆದರಿಕೆಯಾಗಿದೆ. ಚೆರ್ವತ್ತೂರು ವೀರಮಲಕುನ್ನ್‌ನಲ್ಲೂ ಗುಡ್ಡೆ ಕುಸಿಯುತ್ತಿದೆ. ಅವಗಢ ಸಂಭವಿಸಿದರೆ ರಕ್ಷಣಾ ಕಾರ್ಯಕ್ಕೆ ಪ್ರತ್ಯೇಕ ತಂಡವನ್ನು ತುರ್ತಾಗಿ ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುವ ವಲಯದಲ್ಲಿ ಜನರ ಜೀವ ಹಾಗೂ ಸಂಚಾರ ಸ್ವಾತಂತ್ರ್ಯಕ್ಕೆ ತೊಂದರೆಯಾಗುವ ಯಾವುದೇ ಕ್ರಮ ಉಂಟಾಗಬಾರದೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನುಡಿದರು. ಹೆದ್ದಾರಿ ನಿರ್ಮಾಣದಲ್ಲಿ ಜನರಿಗುಂಟಾಗಿರುವ ಆತಂಕವನ್ನು ಕೇಂದ್ರ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿರುವುದಾಗಿಯೂ ಸಂಸದರು ನುಡಿದರು. ಮಂಜೇಶ್ವರದ ಮುಷ್ಕರ ಸಮಿತಿ ಮುಂದಿಟ್ಟಿರುವ ವಿಷಯಗಳಲ್ಲಿ ಅನುಕೂಲಕರವಾದ ಪರಿಗಣನೆ ಉಂಟಾಗಬೇಕೆಂದು ಕಾಞಂಗಾಡ್, ಐಂಗೋತ್, ಪಡನ್ನಕ್ಕಾಡ್‌ಗಳಲ್ಲಿ ನೀರು ಸಂಗ್ರಹಗೊಂಡಿರುವುದನ್ನು ಪರಿಹರಿಸಲು ಸೂಕ್ತ ಕ್ರಮ ಸ್ವೀಕರಿಸಬೇಕೆಂದು ಸಂಸದರು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವಿಳಂಬ ನೀತಿಯನ್ನು ಪರಿಹರಿಸಲು ಉತ್ತರ ಕೇರಳದ ಸಂಸದರು ಕೇಂದ್ರ ಸಚಿವರನ್ನು ಕಾಣುವುದಾಗಿಯೂ ಅವರು ನುಡಿದರು.
ಚಟ್ಟಂಚಾಲ್ ಜಂಕ್ಷನ್‌ಗೆ ಮೇಲ್ಪ ರಂಬ್ ಭಾಗದಿಂದ ಬರುವ ವಾಹನಗಳು ಪೊಯಿನಾಚಿಗೆ ಸಾಗಲು ವ್ಯವಸ್ಥೆ ಮಾಡಬೇಕೆಂದು ಸಿ.ಎಚ್. ಕುಂಞಂಬು ಆಗ್ರಹಿಸಿದರು. ಮಂಜೇಶ್ವರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂ ದಾಗಿ ಸಾರಿಗೆ ತಡೆ ಉಂಟಾಗುವ ಪ್ರದೇಶದ ನಿವಾಸಿಗಳಿಗೆ ನಡೆದು ಹೋಗಲು ಸಾಧ್ಯವಾಗುವ ರೀತಿಯಲ್ಲಿ ಅಂಡರ್ ಪಾಸ್ ಸಿದ್ಧಗೊಳಿಸಬೇಕೆಂದು ಶಾಸಕ ಅಶ್ರಫ್ ಆಗ್ರಹಿಸಿದರು. ಪ್ರಸ್ತುತ ನಿರ್ಮಿಸುವ ಕಲ್ವರ್ಟ್‌ಗೆ ಹೊಂದಿ ಕೊಂಡು ಪ್ರಯಾಣಿಕರಿಗೆ ನಡೆದು ಹೋಗಲಿರುವ ಸೌಕರ್ಯ ಹೆದ್ದಾರಿಯ ಡಿಸೈನ್‌ನಲ್ಲಿ ಒಳಗೊಳ್ಳಿಸಬೇಕೆಂದು ಶಾಸಕರು ಆಗ್ರಹಿಸಿದರು. ಮಾವಿನಕಟ್ಟೆ ಯಲ್ಲಿ ಫೂಟ್ ಓವರ್‌ಬ್ರಿಡ್ಜ್ ನಿರ್ಮಿಸಬೇಕೆಂದು ಅವರು ಆಗ್ರಹಿಸಿದರು. ನಿರ್ಮಾಣ ನಡೆಯುವ ರಾಷ್ಟ್ರೀಯ ಹೆದ್ದಾರಿಯಿಂದಿರುವ ನೀರು ಸರ್ವೀಸ್ ರಸ್ತೆಗೆ ಬಿದ್ದು ಹೊಂಡಗಳು ರೂಪುಗೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎನ್.ಎ. ನೆಲ್ಲಿಕುನ್ನು ಆಗ್ರಹಿಸಿದರು.
ಚೆರ್ಕಳ ಶಾಲಾ ಪರಿಸರದಲ್ಲಿ ಅಂಡರ್‌ಪಾಸ್ ರಸ್ತೆ ತುರ್ತಾಗಿ ಪೂರ್ತಿಗೊಳಿಸಬೇಕೆಂದು ಶಾಸಕರು ನಿರ್ದೇಶಿಸಿದರು. ಜನಪ್ರತಿನಿಧಿಗಳ ನಿರ್ದೇಶವನ್ನು ಪರಿಶೀಲಿಸಿ ಪರಿಹರಿಸಲು ತುರ್ತು ಕ್ರಮ ಸ್ವೀಕರಿಸಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ವಿಭಾಗ ಪ್ರೊಜೆಕ್ಟ್ ಡೈರೆಕ್ಟರ್ ಪುನೀತ್ ಕುಮಾರ್ ನುಡಿದರು. ಡೆಪ್ಯುಟಿ ಕಲೆಕ್ಟರ್ ಸುನಿಲ್ ಮ್ಯಾಥ್ಯು, ನಿರ್ಮಾಣ ಕಂಪೆನಿಗಳ ಅಧಿಕಾರಿಗಳಾದ ಸೇತು ಮಾಧವನ್ ನಾಯರ್, ನಳಿನಾಕ್ಷನ್, ಬಿ.ಎಸ್. ರೆಡ್ಡಿ, ಸಿ.ಎಚ್. ಶ್ರೀರಾಮ ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.