ಕಾಡುಹಂದಿ ಬಡಿದು ಸ್ಕೂಟರ್ ಪಲ್ಟಿ: ಗಾಯಾಳುಗಳನ್ನು ರಕ್ಷಿಸುತ್ತಿದ್ದಾಗ ಬಂದ ಕಾರು ಢಿಕ್ಕಿ ಹೊಡೆದು ಮೂವರು ಗಂಭೀರ
ಕುಂಬಳೆ: ಕಾಡು ಹಂದಿಗಳು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬಿದ್ದು ಗಾಯಗೊಂಡವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವೇಳೆ ತಲುಪಿದ ಬೇರೊಂದು ಕಾರು ಅವರಿಗೆ ಢಿಕ್ಕಿ ಹೊಡೆದು ನವವರ ಸಹಿತ ಮೂರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಸ್ಕೂಟರ್ ಪ್ರಯಾಣಿಕರಾದ ಕುಂಟಂಗೇರಡ್ಕದ ಯೂಸಫ್ (46), ಪತ್ನಿ ಖದೀಜ (44), ಅವರನ್ನು ರಕ್ಷಿಸಲು ತಲಪಿದ ಮೊಗ್ರಾಲ್ ನಿವಾಸಿಯಾದ ನವವರ ಮನ್ಸೂರ್ (35) ಎಂಬಿವರು ಗಾಯಗೊಂಡವರಾಗಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮೊನ್ನೆ ರಾತ್ರಿ 10 ಗಂಟೆ ವೇಳೆ ಕುಂಬಳೆ ಶಾಂತಿಪಳ್ಳದಲ್ಲಿ ಅಪಘಾತ ಸಂಭವಿಸಿದೆ. ಯೂಸಫ್ ಹಾಗೂ ಪತ್ನಿ ಖದೀಜ ಸಂಬಂಧಿಕರ ಮನೆಗೆ ತೆರಳಿ ಸ್ಕೂಟರ್‌ನಲ್ಲಿ ಮರಳಿ ಬರುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಕಾಡುಹಂದಿಗಳು ಸ್ಕೂಟರಗೆ ಢಿಕ್ಕಿ ಹೊಡೆದಿತ್ತು. ಇದರಿಂದ ನಿಯಂತ್ರಣ ತಪ್ಪಿದ ಸ್ಕೂಟರ್ ಮಗುಚಿ ಖದೀಜ ರಸ್ತೆಗೆ ಹಾಗೂ ಯೂಸಫ್ ರಸ್ತೆ ಬದಿಯ ಪೊದೆಗಳ ಮೇಲೆ ಬಿದ್ದಿದ್ದರು. ಅವರ ಹಿಂದಿನಿಂದ ಬಂದ ಕಾರಿನಲ್ಲಿದ್ದ ಮನ್ಸೂರ್ ಸ್ಕೂಟರ್‌ನಿಂದ ಬಿದ್ದು ಗಾಯಗೊಂಡವರನ್ನು ರಕ್ಷಿಸಲೆಂದು ರಸ್ತೆಗೆ ಇಳಿದಿದ್ದಾರೆ. ಖದೀಜರನ್ನು ಮನ್ಸೂರ್ ಕಾರಿಗೆ ಹತ್ತಿಸುತ್ತಿದ್ದಾಗ ಹಿಂಬದಿಯಿಂದ ಬಂದ ಬೇರೊಂದು ಆಲ್ಟೋ ಕಾರು ಅವರಿಬ್ಬರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಅವರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಒಂದು ವಾರ ಹಿಂದೆಯಷ್ಟೇ ಮದುವೆಯಾದ ಮನ್ಸೂರ್ ಅತಿಥಿ ಸತ್ಕಾರ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತವುಂ ಟಾಗಿದೆ. ಗಾಯಾಳುಗಳನ್ನು ಮನ್ಸೂರ್‌ರ ಸಹೋದರ ಆಸ್ಪತ್ರೆಗೆ ತಲುಪಿಸಿದ್ದಾರೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.