ಪಾಣತ್ತೂರು ಬಳಿ ಮತ್ತೆ ಚಿರತೆ ಕಾಟ: ದನವನ್ನು ಕೊಂದು ಅರ್ಧ ತಿಂದ ಪ್ರಾಣಿ
ಕಾಸರಗೋಡು: ಪಾಣತ್ತೂರು ಪರಿಸರದಲ್ಲಿ ಮತ್ತೆ ಚಿರತೆ ಕಾಟ ತಲೆಯೆತ್ತಿದೆ. ಪಾಣತ್ತೂರಿಗೆ ಸಮೀ ಪದ ದೊಡ್ಡಮನೆಯ ಚಂದ್ರಶೇಖರ ಎಂಬವರ ಹಟ್ಟಿಯಲ್ಲಿ ಕಟ್ಟಿಹಾಕಲಾಗಿದ್ದ ದನವನ್ನು ಚಿರತೆ ಕೊಂದು ಅದರ ಅರ್ಧ ಮಾಂಸ ತಿಂದು ಹಾಕಿದೆ. ಈ ಹಟ್ಟಿಯಲ್ಲಿ ಮೂರು ದನಗಳಿದ್ದವು. ಆ ಪೈಕಿ ಚಿರತೆ ಒಂದನ್ನು ಕೊಂದು ಹಾಕಿದೆ. ರಾತ್ರಿ ವೇಳೆ ಚಿರತೆ ದಾಳಿ ನಡೆದಿದೆ. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಬಳಾಂತೋಡು ಪಶುಸಂಗೋಪನಾ ಆಸ್ಪತ್ರೆಯ ವೈದ್ಯರಾದ ಡಾ| ಅರುಣ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ನಂತರ ದನದ ಕಳೇಬರವನ್ನು ಅಲ್ಲೇ ಮರಣೋತ್ತರ ಪರೀಕ್ಷೆಗೊಳಪಡಿಸಿ ಸಂಸ್ಕರಿಸ ಲಾಗಿದೆ. ಅರಣ್ಯಪಾಲಕರು ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಒಂದು ತಿಂಗಳ ಹಿಂದೆ ಕಲ್ಲಪ್ಪಳ್ಳಿಯ ಹಲವು ಮನೆಗಳ ಸಾಕು ನಾಯಿಗಳನ್ನು ಚಿರತೆ ಕೊಂದಿತ್ತು. ಚಿರತೆ ಕಾಟ ಇಡೀ ಪ್ರದೇಶದ ಜನರನ್ನು ಭೀತಿಯಲ್ಲಿ ಕಳೆಯುವಂತೆ ಮಾಡಿದೆ.
ಕಲ್ಲಪಳ್ಳಿ ದೊಡ್ಡಮನೆ ಪರಿಸರದಲ್ಲಿ ಚಿರತೆ ಕಾಟ ಇರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಮಕ್ಕಳು ಹೆಚ್ಚಿನ ಜಾಗ್ರತೆ ಪಾಲಿಸಬೇಕು. ಮನೆಗಳಲ್ಲಿ ಸಾಕುಪ್ರಾಣಿಗಳ ಭದ್ರತೆ ಯನ್ನು ಖಾತರಿಪಡಿಸಬೇಕೆಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.