ಹಾರೆಯಿಂದ ಹೊಡೆದು ತಾಯಿಯನ್ನು ಕೊಲೆಗೈದ ಪುತ್ರ
ಬೋವಿಕ್ಕಾನ: ಹಾರೆಯಿಂದ ಹೊಡೆದು ತಾಯಿಯನ್ನು ಬರ್ಭರವಾಗಿಕೊಲೆಗೈದು ದಲ್ಲದೆ ತಡೆಯಲು ಬಂದ ಸಹೋದರನ ಮೇಲೂ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ಮುಳಿಯಾರು ಪೊವ್ವಲ್ ಬೆಂಚ್ ಕೋರ್ಟ್ ಸಮೀಪದ ಅಬ್ಜುಲ್ ನಾಸರ್ (42) ಬಂಧಿತ ಆರೋಪಿ. ತಾಯಿ ಬಿ. ನಬೀಸಾ (೫೯)ರನ್ನು ಕೊಲೆಗೈದಿದ್ದು, ಅದನ್ನು ತಡೆಯಲೆ ತ್ನಿಸಿದ ಸಹೋದರ ಅಬ್ದುಲ್ ಮಜೀದ್‌ನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ.
ನಿನ್ನೆ ಸಂಜೆ ಸುಮಾರು 4.30ರ ವೇಳೆ ಇಡೀ ಊರನ್ನೇ ನಡುಗಿಸಿದ ಈ ಭೀಕರ ಕೊಲೆ ಕೃತ್ಯ ನಡೆದಿದೆ. ಕೊಲೆಗೈಯ್ಯಲ್ಪಟ್ಟ ನಬೀಸಾರ ಪತಿ ಪಳ್ಳಿಕ್ಕಾಲ್ ಅಬ್ದುಲ್ಲಕುಂಞಿ ನಿನ್ನೆ ಬೆಳಿಗ್ಗೆ ಮಗಳ ಮನೆಗೆ ಹೋಗಿದ್ದರು. ಆ ವೇಳೆ ನಬೀಸಾ ಮತ್ತು ಇಬ್ಬರು ಪುತ್ರರು ಮಾತ್ರವೇ ಮನೆಯಲ್ಲಿದ್ದರು. ಪುತ್ರ ಅಬ್ದುಲ್ ಮಜೀದ್ ನಿನ್ನೆ ಸಂಜೆ ಮನೆಯಲ್ಲಿ ನಿದ್ರಿಸುತ್ತಿದ್ದರು. ಆ ವೇಳೆ ತಾಯಿ ಜೋರಾಗಿ ಕೂಗುವ ಧ್ವನಿ ಕೇಳಿಸಿದಾಗ ಅಬ್ದುಲ್ ಮಜೀದ್ ಎಚ್ಚೆತ್ತು ಹೊರಬಂದು ನೋಡಿದಾಗ ತಾಯಿ ತಲೆಗೆ ಏಟು ಬಿದ್ದು ರಕ್ತದ ಮಡುವಿನಲ್ಲಿಬಿದ್ದಿರುವುದನ್ನು ಕಂಡಿದ್ದಾರೆ. ಆಗ ಸಹೋದರನಾದ ಆರೋಪಿ ಅಬ್ದುಲ್ ನಾಸರ್ ಸಮೀಪದಲ್ಲೇ ಹಾರೆಯೊಂದಿಗೆ ನಿಂತಿರುವುದನ್ನು ಕಂಡಿದ್ದಾರೆ. ಆತನನ್ನು ತಡೆಯಲೆತ್ನಿಸಿದಾಗ ಆತ ಹಾರೆಯಿಂದ ಅಬ್ದುಲ್ ಮಜೀದ್‌ನ ತಲೆಗೂ ಹೊಡೆದನೆನ್ನಲಾಗಿದೆ. ಬೊಬ್ಬೆ ಕೇಳಿದ ನೆರೆಮನೆಯವರು ಓಡಿ ಬಂದು ರಕದ ಮಡುವಿನಲ್ಲಿ ಬಿದ್ದಿದ್ದ ನಬೀಸ ಮತ್ತು ಪುತ್ರ ಅಬ್ದುಲ್ ಮಜೀದ್‌ನನ್ನು ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆ ನಬೀಸಾರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಗಾಯಗೊಂಡ ಅಬ್ದುಲ್ ಮಜೀದ್‌ರನ್ನು ಚೆಂಗಳದ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ.
ಇಷ್ಟೆಲ್ಲಾ ಆದಾಗಲೂ ಅರೋಪಿ ಅಬ್ದುಲ್ ನಾಸರ್ ಮನೆ ಸಮೀಪದಲ್ಲೇ ನಿಂತಿದ್ದನು. ಬಳಿಕ ಪೊಲೀಸರು ಆತನನ್ನು ಆದೂರು ಪೊಲೀಸ್ ಠಾಣೆಗೆ ಸಾಗಿಸಿ ನಂತರ ಆತನ ಬಂಧನ ದಾಖಲಿಸಿಕೊಂಡರು.
ನಬೀಸಾರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ, ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್, ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಸಿ. ಸುನಿಲ್ ಕುಮಾರ್, ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಹೊಣೆಗಾರಿಕೆ ಹೊಂದಿರುವ ಬೇಡಗಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಂಜಿತ್ ರವೀಂದ್ರನ್ ಘಟನೆ ನಡೆದ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಫೋರೆನ್ಸಿಕ್ ತಜ್ಞರು ಕೊಲೆ ನಡೆದ ಮನೆಗೆ ಇಂದು ಬೆಳಿಗ್ಗೆ ಆಗಮಿಸಿ ಬೆರಳಚ್ಚು ಇತ್ಯಾದಿ ಅಗತ್ಯದ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿದರು. ಅಷ್ಟರತನಕ ಮನೆಯೊಳಗೆ ಪ್ರವೇ ಶಿಸಲು ಪೊಲೀಸರು ಯಾರಿಗೂ ಅನುಮತಿ ನೀಡಿರಲಿಲ್ಲ.
ಮೃತ ನಬೀಸ ಪತಿ ಮತ್ತು ಈ ಇಬ್ಬರು ಮಕ್ಕಳ ಹೊರತಾಗಿ ಇತರ ಮಕ್ಕಳಾದ ಇರ್ಫಾನ, ಇಕ್ಬಾಲ್, ಅಬ್ದುಲ್ ಖಾದರ್, ಇರ್ಷಾನಾ, ಅಳಿಯ-ಸೊಸೆಯಂದಿರಾದ ಸಾದಿಕ್, ಕಬೀರ್, ಸಾಕಿಯಾ, ಸಹೋದರ-ಸಹೋದರಿಯರಾದ ಅಬ್ದುಲ್ಲ, ಬೀಫಾ ತಿಮ್ಮ, ರುಖಿಯಾ, ಹವ್ವಾಬಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.