ತಿಂಗಳ ಹಿಂದೆ ಕಾಡು ಹಂದಿ ದಾಳಿಯಿಂದ ಗಂಭೀರ ಗಾಯಗೊಂಡ ಆಟೋ ಚಾಲಕನಿಗೆ ಮತ್ತೆ ಹಂದಿಯ ದಾಳಿ
ಕುಂಬಳೆ: ತಿಂಗಳ ಹಿಂದೆ ಕಾಡುಹಂದಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಆಟೋ ರಿಕ್ಷಾ ಚಾಲಕನಿಗೆ ನಿನ್ನೆ ಮತ್ತೆ ಕಾಡುಹಂದಿ ದಾಳಿ ನಡೆಸಿ ಗಾಯಗೊಳಿಸಿದೆ.
ಕೊಡ್ಯಮ್ಮೆ ಪುಡಿಕುಂಡಿನ ಸೆಲ್ತು ಮಹಮ್ಮದ್ ಎಂಬವರು ಕಾಡುಹಂದಿ ದಾಳಿಯಿಂದ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 9.30ರ ವೇಳೆ ಆಟೋ ರಿಕ್ಷಾ ಬಾಡಿಗೆಗೆ ತೆರಳಿ ಮರಳುತ್ತಿದ್ದಾಗ ಕೊಡ್ಯಮ್ಮೆ ಶಿಬಿಲಿ ನಗರದಲ್ಲಿ ರಸ್ತೆಯಲ್ಲಿದ್ದ ಕಾಡುಹಂದಿ ಆಟೋ ರಿಕ್ಷಾಕ್ಕೆ ಢಿಕ್ಕಿಹೊಡೆದಿದೆ. ಇದರಿಂದ ಆಟೋ ರಿಕ್ಷಾ ಮಗುಚಿ ಬಿದ್ದು ಸೆಲ್ತು ಮಹಮ್ಮದ್ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಕುಂಬಳೆ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ತಿಂಗಳುಗಳ ಹಿಂದೆಯೂ ಇವರಿಗೆ ಕಾಡು ಹಂದಿ ದಾಳಿನಡೆಸಿ ಗಾಯಗೊಳಿಸಿತ್ತು. ರಾತ್ರಿ ವೇಳೆ ಬಾಡಿಗೆಗೆ ತೆರಳಿ ಮರಳುತ್ತಿದ್ದಾಗ ಸೆಲ್ತು ಮಹಮ್ಮದ್‌ರ ಆಟೋ ರಿಕ್ಷಾಕ್ಕೆ ಕಂಚಿಕಟ್ಟೆಯಲ್ಲಿ ಕಾಡುಹಂದಿ ಢಿಕ್ಕಿ ಹೊಡೆದಿತ್ತು. ಇದರಿಂದ ಅಂದು ಸೆಲ್ತು ಮಹಮ್ಮದ್‌ರ ಬೆನ್ನೆಲುಬಿಗೆ ತೀವ್ರ ಗಾಯವಾಗಿತ್ತು. ಹಲವು ದಿನಗಳಕಾಲ ಚಿಕಿತ್ಸೆ ಪಡೆದು ಮತ್ತೆ ಕೆಲಸ ಆರಂಭಿಸಿದ್ದರು.
ಇದೇ ವೇಳೆ ಕುಂಟಂಗೇರಡ್ಕ ಹಾಗೂ ಪರಿಸರ ಪ್ರದೇಶದಲ್ಲಿ ಕಾಡು ಹಂದಿಗಳ ಉಪಟಳ ತೀವ್ರಗೊಂಡಿದೆ. ಮೊನ್ನೆ ರಾತ್ರಿ ಕುಂಬಳೆ ಸಿಎಚ್‌ಸಿ ರಸ್ತೆಯಲ್ಲಿ ವಾಸಿಸುವ ಅಶ್ರಫ್ ಸ್ಕೈಲರ್ ಎಂಬವರ ಸ್ಕೂಟರ್‌ನ ಮೇಲೆ ಕಾಡು ಹಂದಿ ದಾಳಿ ನಡೆಸಿ ಹಾನಿಗೊಂಡಿತ್ತು. ಕಾಡು ಹಂದಿಗಳ ಉಪಟಳ ತೀವ್ರ ಗೊಂಡಿರುವುದರಿಂದ ನಾಡಿನಲ್ಲಿ ಆತಂಕ ತೀವ್ರಗೊಂಡಿದೆಯೆಂದು ಸಾರ್ವಜನಿಕರ ತಿಳಿಸುತ್ತಿದ್ದಾರೆ.