ಗಾಂಜಾ ಪತ್ತೆ ಪ್ರಕರಣ : ಆರೋಪಿಗೆ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಗಾಂಜಾ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಪ್ರಿಯ ಕೆ. ಅವರು ಎರಡು ವರ್ಷ ಕಠಿಣ ಸಜೆ ಮತ್ತು 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಪಡನ್ನ ಅಲಕ್ಕಾಲ್ ಸುಹರಾ ಮಂಜಿಲ್ನ ನೂರ್ ಮುಹಮ್ಮದ್ ಅಲಿಯಾಸ್ ನೂರು (44) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಅಜಾನೂರು ಗ್ರಾಮದ ನೋರ್ತ್ ಕೋಟಚ್ಚೇರಿಯಲ್ಲಿ ಹೊಸದುರ್ಗ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಇ.ವಿ. ಸುಧಾಕರನ್ರ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸಲಾಗುತ್ತಿದ್ದ 3 ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಂಡು ಅದಕ್ಕೆ ಸಂಬಂಧಿಸಿ ನೂರ್ ಮುಹಮ್ಮದ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಆ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗೆ ಈ ಶಿಕ್ಷೆ ವಿಧಿಸಿದೆ. ಅಂದು ಇನ್ಸ್ಪೆಕ್ಟರ್ ಕೆ.ವಿ. ವೇಣುಗೋ ಪಾಲನ್ ಬಳಿಕ ಟಿ.ಪಿ. ಸುಮೇಶ್ರವರು ಈ ಪ್ರಕರಣದ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರವಾಗಿ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.