ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ನಿರ್ಮಾಣ ಪ್ರತಿಭಟಿಸಿ ಕುಂಬಳೆಯಲ್ಲಿ ಕ್ರಿಯಾ ಸಮಿತಿಯಿಂದ ಚಳವಳಿಗೆ ಸಿದ್ಧತೆ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಕುಂಬಳೆ ನಗರದಲ್ಲಿ ಅವೈಜ್ಞಾನಿಕ ರೀತಿಯ ನಿರ್ಮಾಣ ಹಾಗೂ ಕಾಮಗಾರಿ ಯಲ್ಲಿ ಅನಿಶ್ಚಿತತೆ ಮುಂದುವರಿದ ಹಿನ್ನೆಲೆಯಲ್ಲಿ ನಾಗರಿಕರು ಕ್ರಿಯಾ ಸಮಿತಿ ರೂಪೀಕರಿಸಿ ಚಳವಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಕುಂಬಳೆ ಪಂ ಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್‌ರ ಅಧ್ಯಕ್ಷತೆ ಯಲ್ಲಿ ಪಂಚಾಯತ್ ಸಭಾಂಗಣ ದಲ್ಲಿ ನಡೆದ ಕ್ರಿಯಾ ಸಮಿತಿ ರೂಪೀ ಕರಣ ಸಭೆಯಲ್ಲಿ ರಾಜಕೀಯ ಪಕ್ಷ ಪ್ರತಿನಿಧಿಗಳ ಸಹಿತ ವಿವಿಧ ವಲಯ ಗಳಿಂದ ಹಲವರು ಭಾಗವಹಿಸಿದರು. ಸರಿಯಾದ ನಿರ್ಧಾರವಿಲ್ಲದೆ ಆರಂಭಿಸಿದ ನಿರ್ಮಾಣ ಚಟುವಟಿಕೆ ಕಳೆದ ಒಂದು ವರ್ಷದಿಂದ ಆರಂಭಗೊಂಡಲ್ಲೇ ಸ್ತಬ್ದಗೊಂಡಿದೆ. ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ರೈಲ್ವೇ ನಿಲ್ದಾಣವರೆಗಿನ ೩೦೦ ಮೀಟರ್‌ಗಿಂತ ಹೆಚ್ಚು ಅವೈಜ್ಞಾನಿಕ ನಿರ್ಮಾಣ ಕಾಮಗಾರಿ ನಡೆದಿದೆ. ರೈಲ್ವೇ ನಿಲ್ದಾಣ ಮುಂಭಾಗ ನಿರ್ಮಿಸಿದ ಕೆಳ ಸೇತುವೆ ಫಲಪ್ರದವಲ್ಲ. ಅತ್ಯಗತ್ಯಕ್ಕಾಗಿ ಬೇಕಾದ ಸ್ಥಳದಲ್ಲಿ ಕೆಳ ಸೇತುವೆ ಹಾಗೂ ಸರ್ವೀಸ್ ರೋಡ್ ನಿರ್ಮಾಣಗೊಳ್ಳದಿರುವುದರಿಂದ ಜನರ ಸಂಕಷ್ಟ ಹೆಚ್ಚಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಾರಿಗೆ ಅಡಚಣೆ ತೀವ್ರಗೊಂಡಿದೆ. ಇದನ್ನು ಹೊರತುಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ನಗರಕ್ಕೆ ಪ್ರವೇಶಿಸುವ ಭಾಗದಲ್ಲಿ ಫ್ಲೈಓವರ್ ನಿರ್ಮಿಸಬೇಕು. ಸರ್ವೀಸ್ ರಸ್ತೆ ನಿರ್ಮಾಣ ಪೂರ್ಣಗೊಳಿಸಬೇಕು, ಕರಾವಳಿ ಭಾಗಕ್ಕೆ ವಾಹನಗಳು ಸಾಗುವ ಭಾಗದಲ್ಲಿ ಸರ್ವೀಸ್ ರಸ್ತೆ ಎರಡು ದ್ವಿಪಥಗೊಳಿಸಬೇಕು ಮೊದಲಾದ ಪ್ರಧಾನ ಬೇಡಿಕೆಗಳನ್ನು ಕ್ರಿಯಾ ಸಮಿತಿ ಮುಂದಿರಿಸಿದೆ. ಚಳವಳಿಯ ಮೊದಲ ಹಂತದ ಕುರಿತು ಚರ್ಚೆ ನಡೆಸಲು ಶೀಘ್ರ ಸಭೆ ನಡೆಯಲಿದೆ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಜಿಲ್ಲಾ ಪಂ. ಸದಸ್ಯೆ ಜಮೀಲಾ ಸಿದ್ದಿಕ್, ಕುಂಬಳೆ ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ. ಸಬೂರ, ಬಿ.ಎ. ರಹ್ಮಾನ್, ಪಂ. ಸದಸ್ಯರಾದ ಯೂಸಫ್ ಉಳುವಾರ್, ಕೌಲತ್, ವಿವೇಕಾನಂದ ಶೆಟ್ಟಿ, ವಿದ್ಯಾ ಪೈ, ಪಂಚಾಯತ್ ಯೋಜನ ಸಮಿತಿ ಉಪಾಧ್ಯಕ್ಷ ಎ.ಕೆ. ಆರೀಫ್ ಮಾತನಾಡಿದರು. ೭೦ ಮಂದಿ ಸದಸ್ಯರುಳ್ಳ ಮುಷ್ಕರ ಸಮಿತಿಗೆ ರೂಪು ನೀಡಲಾಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್, ಬ್ಲೋಕ್ ಪಂ. ಅಧ್ಯಕ್ಷ ಸಿ.ಎ. ಸೈಮ, ಜಿಲ್ಲಾ ಪಂ. ಸದಸ್ಯೆ ಜಮೀಲಾ ಸಿದ್ದಿಕ್, ಎಂ. ಅಬ್ಬಾಸ್, ಮಂಜುನಾಥ ಆಳ್ವ, ರಘುದೇವನ್ ಮಾಸ್ತರ್, ಸುರೇಶ್ ಕುಮಾರ್ ಶೆಟ್ಟಿ, ಮುಹಮ್ಮದ್ ಅರಬಿ ಕುಂಬಳೆ, ಶಿವರಾಮ ಕುಂಬಳೆ, ನಾಗೇಶ್ ಕಾರ್ಳೆ, ಗಫೂರ್ ಎರಿಯಾಲ್, ರವೀಂದ್ರನ್ ಕುಂಬಳೆ ಎಂಬಿವರು ರಕ್ಷಾಧಿಕಾರಿಗಳಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ ಯು.ಪಿ. ತಾಹಿರ ಯೂಸಫ್ (ಚೆಯರ್ ಪರ್ಸನ್), ಎ.ಕೆ. ಆರೀಫ್ (ಪ್ರಧಾನ ಕಾರ್ಯದರ್ಶಿ), ರಘುನಾಥ ಪೈ (ಕೋಶಾಧಿಕಾರಿ), ನಾಸರ್ ಮೊಗ್ರಾಲ್, ಅಶ್ರಫ್ ಕಾರ್ಳೆ (ಕಾರ್ಯಾಧ್ಯಕ್ಷರು), ಬಿ.ಎ. ರಹ್ಮಾನ್ ಆರಿಕ್ಕಾಡಿ, ಎಂ. ಸಬೂರ (ವರ್ಕಿಂಗ್ ಕನ್ವೀನರ್‌ಗಳು), ನಸೀಮ ಖಾಲಿದ್, ಪ್ರೇಮಾ ಶೆಟ್ಟಿ (ವೈಸ್ ಚೆಯರ್‌ಮೆನ್) ಎಂಬಿವರನ್ನು ಆರಿಸಲಾಯಿತು.