ರೈಲು ಪ್ರಯಾಣಿಕರಿಗೆ ಕಲ್ಲೆಸೆದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿ ಕೊನೆಗೂ ಸೆರೆ
ಕಾಸರಗೋಡು: ರೈಲಿನೊಳಗೆ ಮದ್ಯದ ಗುಂಗಿನಲ್ಲಿ ಪ್ರಯಾಣಿಕನಿಗೆ ಕಲ್ಲೆಸೆದು ಗಾಯಗೊಳಿಸಿದ ಆರೋಪಿಯನ್ನು ಕಾಸರಗೋಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಚಿತ್ತಾರಿ ನಿವಾಸಿ ಸಿ.ಬಿ. ಅಬ್ದುಲ್ ರಿಯಾಸ್ (31) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಶುಕ್ರವಾರ ಮಧ್ಯಾಹ್ನ ಈತ ಮಂಗಳೂರಿನಿಂದ ಚೆನ್ನೈಗೆ ಹೋಗುತ್ತಿದ್ದ ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಮದ್ಯದ ಅಮಲಿನಲ್ಲಿ ರೈಲು ಪ್ರಯಾಣಿಕರಿಗೆ ಕಿರುಕುಳ ನೀಡಲಾರಂಭಿಸಿದೆ. ರೈಲು ಹೊಸದುರ್ಗ ನಿಲ್ದಾಣಕ್ಕೆ ತಲುಪಿದಾಗ ರೈಲು ಪ್ರಯಾಣಿಕರು ಸೇರಿ ಆತನನ್ನು ರೈಲಿನಿಂದ ಹೊರದಬ್ಬಿದ್ದರು. ಬಳಿಕ ರೈಲು ಅಲ್ಲಿಂದ ಪ್ರಯಾಣ ಮುಂದುವರಿಸುತ್ತಿದ್ದಂತೆಯೇ ಆರೋಪಿ ಆ ರೈಲಿಗೆ ಕಲ್ಲು ತೂರಾಟ ನಡೆಸಿದ್ದು ರೈಲು ಪ್ರಯಾಣಿಕ ಕೊಲ್ಲಂ ಶಕ್ತಿಕುಳಂಗರ ನಿವಾಸಿ ಸಿ. ಮುರಳೀಧರನ್ (63)ರ ತಲೆಗೆ ಆ ಕಲ್ಲು ಬಡಿದು ಅವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮಾತ್ರವಲ್ಲದೆ ಅವರ ತಲೆಗೆ ಏಳು ಸ್ಟಿಚ್‌ಗಳನ್ನು ಹಾಕಲಾಗಿತ್ತು. ಅದಕ್ಕೆ ಸಂಬಂಧಿಸಿ ರೈಲ್ವೇ ಪೊಲೀಸರು ಆರೋಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಹಲವು ಸಾಕ್ಷಿದಾರರ ಹೇಳಿಕೆಗಳು ಮತ್ತು ಆ ಪರಿಸರದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಆರೋಪಿ ಬಗ್ಗೆ ಮಾಹಿತಿ ಲಭಿಸಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲ್ಲಿ ಹೊಸದುರ್ಗ ಮಾವುಂಗಾಲಿನಿಂದ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿ ಮಾವುಂಗಾ ಲ್‌ನಲ್ಲಿ ಬೀದಿ ವ್ಯಾಪಾರ ನಡೆಸುತ್ತಿ ರುವ ವ್ಯಕ್ತಿಯಾಗಿದ್ದಾನೆ. ಬಂಧಿತನು ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿ ಈ ಹಿಂದೆ ಆರು ವರ್ಷ ಶಿಕ್ಷೆ ಅನುಭವಿಸಿದ್ದನು. ಮಾತ್ರವಲ್ಲದೆ ಗಾಂಜಾ ಸೇವನೆ ಸೇರಿದಂತೆ ಇತರ ಹಲವು ಪ್ರಕರಣಗಳಲ್ಲೂ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.