ಪೋಕ್ಸೋ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಯಿಂದ ಸಂತ್ರಸ್ತೆಯ ತಾಯಿಗೆ ಗರ್ಭದಾನ
ಕಣ್ಣೂರು: ಪ್ರಾಯಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯು ಬಾಲಕಿಯ ತಾಯಿಯನ್ನು ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಘಟನೆ ನಡೆದಿದೆ. ಈ ಸಂಬಂಧ ಕಣ್ಣೂರು ಮಿಡಾವಿ ಎಂಬಲ್ಲಿ ವಾಸಿಸುವ ಮಾವಿಂಡಕಂಡಿಹೌಸ್‌ನ ಕೆ.ಕೆ. ಸದಾನಂದನ್ (65) ಎಂಬಾತನನ್ನು ಚಕ್ಕರಕಲ್ ಪೊಲೀಸರು ಬಂಧಿಸಿದ್ದಾರೆ. ಚಕ್ಕರಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸದಾನಂದನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿತ್ತು. ಹಲವು ಕಾಲ ಜೈಲಿನಲ್ಲಿದ್ದ ಬಳಿಕ ಸದಾನಂದನ್ ಬಿಡುಗಡೆಗೊಂಡಿದ್ದನು. ಈ ಮಧ್ಯೆ ಸದಾನಂದನ್ ಕಿರುಕುಳ ನೀಡಿದ ಬಾಲಕಿಯ ತಾಯಿ ಗರ್ಭಿಣಿಯಾದ ವಿಷಯ ತಿಳಿದು ಬಂದಿದೆ. ಗರ್ಭ ಧರಿಸಲು ಕಾರಣ ಸದಾನಂದನ್ ಆಗಿದ್ದಾನೆಂದು ಯುವತಿ ಹೇಳಿಕೆ ನೀಡಿದ್ದಳು. ಆದರೆ ಯುವತಿಯ ಹೇಳಿಕೆಯನ್ನು ಪೊಲೀಸರು ಮೊದಲು ನಂಬಿರಲಿಲ್ಲ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಯುವತಿಯ ಗರ್ಭಛಿದ್ರ ನಡೆಸಲು ತೀರ್ಮಾನಿಸಲಾಗಿತ್ತು. ಇದರಂತೆ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಗರ್ಭಛಿದ್ರ ನಡೆಸುವ ವೇಳೆ ಶಿಶುವಿನ ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದರು. ಸದಾನಂದನ್‌ನ ರಕ್ತ ಸ್ಯಾಂಪಲ್ ಸಂಗ್ರಹಿಸಿ ಡಿಎನ್‌ಎ ತಪಾಸಣೆಗೆ ಕಳುಹಿಸಲಾಗಿತ್ತು. ಇದರ ಫಲಿತಾಂಶ ಲಭಿಸುವುದರೊಂದಿಗೆ ಯುವತಿ ಗರ್ಭ ಧರಿಸಿರುವುದು ಸದಾನಂದನ್‌ನಿಂದಾಗಿದೆ ಎಂದು ತಿಳಿದು ಬಂದಿದೆ. ಇದರಂತೆ ಈತನನ್ನು ಪೊಲೀಸರು ಬಂಧಿಸಿದ್ದಾರೆ.