ರಸ್ತೆ ದಾಟುತ್ತಿದ್ದ ಬಾಲಕ ಬೈಕ್ ಢಿಕ್ಕಿ ಹೊಡೆದು ಮೃತ್ಯು
ಕಲ್ಪಟ್ಟಾ: ತಾತನ ಜೊತೆ ರಸ್ತೆ ದಾಟುತ್ತಿದ್ದಾಗ ಮೂರು ವರ್ಷದ ಬಾಲಕ ಬೈಕ್ ಢಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ವಯನಾಡು ನಾಯ್ಕಟ್ಟೆ ನಿವಾಸಿ ರಹೀಶ್-ಅಂಜನಾ ದಂಪತಿ ಪುತ್ರ ದ್ರುಪದ್ ಮೃತಪಟ್ಟ ಬಾಲಕ.
ಗುರುವಾರ ರಾತ್ರಿ 9.30ರ ಸುಮಾರಿಗೆ ಬಿನಾಚಿಯಲ್ಲಿ ಅಪಘಾತ ಸಂಭವಿಸಿದೆ. ಅಂಜನಾ ಅವರ ತಂದೆ ಮೋಹನ್ದಾಸ್ ಅವರು ಬಿನಾಚಿಯ ಅಂಗಡಿಯಿಂದ ಸಾಮಾನು ಖರೀದಿಸಿ ದ್ರುಪದ್ನನ್ನು ಕರೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೀನಂಗಡಿ ಕಡೆಯಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಮೋಹನ್ದಾಸ್ ಹಾಗೂ ದ್ರುಪದ್ ರಸ್ತೆಗೆ ಬಿದ್ದಿದ್ದಾರೆ. ದ್ರುಪದ್ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೋಹನ್ದಾಸ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಂಜನಾ ಅವರ ಪೂರ್ವಿಕರ ಮನೆ ಬಿನಾಚಿಯಲ್ಲಿದೆ. ಮಂಡಲಪೂಜೆ ನಿಮಿತ್ತ ರಹೀಶ್ ಹಾಗೂ ಕುಟುಂಬ ಬಿನಾಚಿಗೆ ಆಗಮಿಸಿದ್ದರು.