ಮಂಜೇಶ್ವರ ಮಂಡಲದ ತೀರ ಪಂಚಾಯತ್‌ಗಳಿಗೆ ಕಾನೂನಿನಲ್ಲಿ ರಿಯಾಯಿತಿ ಲಭಿಸಲಿಲ್ಲ: ಶಿರಿಯ ಗ್ರಾಮ ಅಭಿವೃದ್ಧಿ ಸಮಿತಿ ಆರೋಪ

ಮಂಜೇಶ್ವರ: ಮಂಜೇಶ್ವರ ಮಂಡಲದ ಮೂರು ಪಂಚಾಯತ್‌ಗಳಲ್ಲಿ ತೀರದೇಶ ಕಾನೂನಿನಲ್ಲಿ ರಿಯಾಯಿತಿ ಪಡೆಯಲು ಸಾಧ್ಯವಾಗದಿರುವುದು ಅಧಿಕಾರಿಗಳ ತೀವ್ರ ಅನಾಸ್ಥೆಯಿಂದಾಗಿ ಎಂದು ಶಿರಿಯ ಗ್ರಾಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಆರೋಪಿಸಿ ದ್ದಾರೆ. ತೀರ ಪರಿಪಾಲನೆ ಕಾನೂನಿನಲ್ಲಿ ಕೇಂದ್ರ ರಿಯಾಯಿತಿ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸಿದ್ಧಪಡಿಸಿದ ಕರಡು ಯಾದಿಯಲ್ಲಿ ಕೇರಳದ ೬೬ ಪಂಚಾಯತ್‌ಗಳಿಗೆ ರಿಯಾಯಿತಿ ಲಭಿಸಿದಾಗ ಮಂಜೇಶ್ವರ ತೀರವಲಯದ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಪಂಚಾಯತ್‌ಗಳು ಒಳಗೊಳ್ಳದಿರುವುದನ್ನು ಪುನರ್ ಪರಿಶೀಲಿಸಬೇಕೆಂದು ಅವರು ಆಗ್ರಹಿಸಿದರು. ಸಮೀಪದ ಮೊಗ್ರಾಲ್ ಪುತ್ತೂರು ಪಂಚಾಯತ್‌ಗೆ ರಿಯಾಯಿತಿ ಲಭಿಸಿದಾಗ ಅದರ ಸಮೀಪದ ಪಂಚಾಯತ್‌ಗಳು ಯಾದಿಯಿಂದ ಹೊರಗಾಗಿದೆ. ಇದು ತೀರ ಪ್ರದೇಶ ನಿವಾಸಿಗಳಿಗೆ ಆತಂಕ ಸೃಷ್ಟಿಸಿದೆ. ಈ ವಿಷಯದಲ್ಲಿ ಸರಕಾರ ಕರಡು ಯಾದಿ ಸಿದ್ಧಪಡಿಸುವಾಗ ಜನಪ್ರತಿನಿಧಿಗಳು, ಪಂಚಾಯತ್ ಆಡಳಿತ ಸಮಿತಿಗಳು ಸಾಕಷ್ಟು ಗಮನ ನೀಡಿಲ್ಲವೆಂದು ಆರೋಪಿಸಲಾಗಿದೆ. ಜನರ ದಟ್ಟಣೆ ಇರುವ ತೀರ ವಲಯವಾದ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಪಂಚಾಯತ್‌ಗಳಲ್ಲಿ ರಿಯಾಯಿತಿ ಲಭಿಸಿದ್ದರೆ ನಿರ್ಮಾಣ ಚಟುವಟಿಕೆಗಳಿಗೆ ೨೦೦ ಮೀಟರ್ ಎಂಬುದು ೫೦ ಮೀಟರ್ ಆಗಿ ಕಡಿತವಾಗುತ್ತಿತ್ತು. ಜನಪ್ರತಿನಿಧಿಗಳ ಸಹಿತದ ಅಜಾಗ್ರತೆ ಇದಕ್ಕೆ ಕಾರಣವಾಗಿದೆ. ಕಾನೂನಿನಲ್ಲಿ ರಿಯಾಯಿತಿ ಲಭಿಸಬಹುದೆಂದು ನಿರೀಕ್ಷಿಸುತ್ತಿರುವ ಸ್ಥಳೀಯ ನಿವಾಸಿಗಳ ಆತಂಕವನ್ನು ಪರಿಹರಿಸಲು ಸಂಬಂಧಪಟ್ಟವರು ಸಿದ್ಧರಾಗದಿದ್ದರೆ ತೀವ್ರ ಆಂದೋಲನಕ್ಕೆ ಶಿರಿಯ ಗ್ರಾಮಸಮಿತಿ ನೇತೃತ್ವ ನೀಡುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ, ಸಂಸದರು, ಶಾಸಕರಿಗೆ ಮನವಿ ನೀಡುವುದಾಗಿಯೂ ಸಮಿತಿಯ ಪದಾಧಿಕಾರಿಗಳಾದ ಅಬ್ಬಾಸ್ ಕೆ.ಎಂ. ಓನಂದ, ಮಶೂದ್ ಶಿರಿಯ, ಜಲೀಲ್ ಶಿರಿಯ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page