ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಅರಣಿಮಥನದ ಮೂಲಕ ಅಗ್ನಿಜನನ; ಕ್ಷೇತ್ರಕ್ಕೆ ಭಕ್ತಜನ ಪ್ರವಾಹ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದಲ್ಲಿ ಅಷ್ಟಬಂಧ ನವೀಕರಣ ಬ್ರಹ್ಮಕಲಶ ಉತ್ಸವದಂಗವಾಗಿ ಅಗ್ನಿ ಜನನ ನಿನ್ನೆ ನಡೆಯಿತು. ದೇರೆಬೈಲು ಶಿವಪ್ರಸಾದ್ ತಂತ್ರಿಯವರ ಪೌರೋಹಿತ್ಯದಲ್ಲಿ ಗರ್ಭಗುಡಿ ಮುಂಭಾಗ ನಮಸ್ಕಾರ ಮಂಟಪದಲ್ಲಿ ಪ್ರತ್ಯೇಕ ಪ್ರಾರ್ಥನೆ ಬಳಿಕ ಅರಣಿಮಥನದ ಮೂಲಕ ಅಗ್ನಿ ಜನನ ನಡೆಸಲಾಗಿದೆ. ಈ ಅಗ್ನಿಯನ್ನು ಸಮರ್ಪಿಸಿ ಸಂಜೀವಿನಿ ಮಹಾ ಮೃತ್ಯುಂಜಯ ಯಾಗ ನಡೆಸಲಾಯಿತು. ಆ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳಾದ ಬಿಂಬಶುದ್ಧಿ, ಪ್ರಾಯಶ್ಚಿತ ಹೋಮ, ದುರ್ಗಾ ನಮಸ್ಕಾರ ಪೂಜೆ, ಮಂಟಪ ಸಂಸ್ಕಾರ, ಅಂಕುರ ಪೂಜೆ ನಡೆಯಿತು.  ಇಂದು ಬೆಳಿಗ್ಗೆ ಪೂರ್ಣ ನವಗ್ರಹ ಹೋಮ, ಬಿಂಬ ಶುದ್ಧಿ ಪ್ರಕ್ರಿಯೆ, ಪ್ರಾಯಶ್ಚಿತ ಹೋಮಗಳು ನಡೆದಿದ್ದು, ಸಂಜೆ ನವಶಕ್ತಿ ಹೋಮ, ಜೀವ ಕುಂಭಾದಿವಾಸ, ಅಷ್ಟಬಂ ಧಾದಿವಾಸ ಮೊದಲಾದವು ನಡೆಯಲಿದೆ.  ಮೂರು ದಶಕಗಳ ಬಳಿಕ ಎಪ್ರಿಲ್ 2ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ 2ರಿಂದ 7ರ ವರೆಗೆ ನಡೆಯುವ ಮೂಡಪ್ಪ ಸೇವೆ ಕಾರ್ಯಕ್ರಮಕ್ಕೆ ಸಂಬಂಧಿಸಿ ನಿನ್ನೆಯೂ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಕ್ಷೇತ್ರ ಸಂದರ್ಶಿಸಿದ್ದು, ವಿವಿಧ ಕ್ಷೇತ್ರಗಳ, ಮಂದಿರಗಳ, ಭಕ್ತ ಜನರ ವತಿಯಿಂದ ಹೊರೆಕಾಣಿಕೆ ಸಮರ್ಪಣೆಯೂ ನಡೆದಿದೆ.

RELATED NEWS

You cannot copy contents of this page