ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯ: ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್; ಪ್ರಚಾರ ಅಸ್ತ್ರವನ್ನಾಗಿ ಬಳಸಲು ಮುಂದಾದ ಬಿಜೆಪಿ
ತಿರುವನಂತಪುರ: ನೆಹರು ಮತ್ತು ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿಕೊಂಡು ತುರ್ತು ಪರಿಸ್ಥಿತಿಯ ಕರಾಳ ಅವಧಿಯನ್ನು ಕಟುವಾಗಿ ಟೀಕಿಸುವ ಮೂಲಕ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೆ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಲಯಾಳಂ ದಿನಪತ್ರಿಕೆಯಾದ ದೀಪಿಕಾದಲ್ಲಿ ಪ್ರಕಟವಾದ ಶಶಿ ತರೂರ್‌ರ ಲೇಖನವು ದೇಶದಾದ್ಯಂತ ಭಾರೀ ವೈರಲ್ ಆಗಿದೆ. ಇದರಲ್ಲಿ ಶಶಿ ತರೂರ್ ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕರಾಳ ಅಧ್ಯಾಯವೆಂದು ಹೇಳಿದ್ದಾರೆ. ಮಾತ್ರವಲ್ಲ ಆ ಸಮಯದಲ್ಲಿ ನಡೆದ ಚಿತ್ರಹಿಂಸೆ, ದೌರ್ಜನ್ಯಗಳನ್ನು ಮರೆಮಾಚಲು ಸಾಧ್ಯವೇ ಇಲ್ಲ. ಮಾಜಿ ಪ್ರಧಾನಿ ಇಂದಿರಾಗಾಂಧಿಯ ಸರ್ವಾಧಿಕಾರ ವಿಧಾನವು ಸಾರ್ವಜನಿಕ ಜೀವನವನ್ನು ಭಯದ ಸ್ಥಿತಿಗೆ ತಳ್ಳಿತು. ಆದರೆ ಇಂದಿನ ಭಾರತ ೧೯೭೫ರ ಭಾರತವಲ್ಲವೆಂದು ಹೇಳುವ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಈ ಲೇಖನದಲ್ಲಿ ಹೊಗಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಯನ್ನು ಮಾತ್ರವಲ್ಲ ಅವರ ಪುತ್ರ ಸಂಜ ಯ್ ಗಾಂಧಿ ಕೂಡಾ ಬಲವಂತದ ಸಂತಾನಹರಣ ಶಸ್ತ್ರಕ್ರಿಯೆ, ಹಿಂಸಾಚಾರ ಸೇರಿದಂತೆ ಭಯಾನಕ ದೌರ್ಜನ್ಯಗಳನ್ನು ನಡೆಸಿದ್ದರೆಂದೂ ಲೇಖನದಲ್ಲಿ ತರೂರ್ ಆರೋಪಿಸಿದ್ದಾರೆ. ೫೦ ವರ್ಷಗಳ ನಂತರವೂ ತುರ್ತು ಪರಿಸ್ಥಿತಿಯ ಅವಧಿಯು ಭಾರತೀಯರ ನೆನಪುಗಳಲ್ಲಿ ಅಳಿಸಲಾಗದಂತೆ ಕೆತ್ತಲ್ಪಟ್ಟಿದೆ. ಈ ಅವಧಿಯು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ಮೂಲಭೂತ ಖಾತರಿಗಳನ್ನು ತೀವ್ರವಾಗಿ ಪರೀಕ್ಷಿಸಿದೆ ಎಂದು ತರೂರ್ ಲೇಖನದಲ್ಲಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಬಳಿಕ ಬಿಜೆಪಿ ಸರಕಾರದ ಪರವಾಗಿ ಹಲವು ಬಾರಿ ಹೇಳಿಕೆಗಳನ್ನು ನೀಡಿದ್ದ ತಿರುವನಂತಪುರದ ಸಂಸದರೂ ಆಗಿರುವ ತರೂರ್ ವಿರುದ್ಧ ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿರುವ ವೇಳೆಯಲ್ಲೇ, ತುರ್ತು ಪರಿಸ್ಥಿತಿ ವಿಷಯದಲ್ಲಿ ತರೂರ್‌ರ ಲೇಖನ ಅವರನ್ನು ಮತ್ತೆ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿಸಿದೆ.
ಶಶಿ ತರೂರ್‌ರ ಈ ಲೇಖನ ರಾಹುಲ್ ಗಾಂಧಿಯವರ ಸರ್ವಾಧಿ ಕಾರದ ವಿರುದ್ಧ ನೀಡಲಾಗಿರುವ ಒಂದು ಸಂದೇಶವೂ ಆಗಿದೆ ಎಂದು ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ ಹೇಳಿದ್ದಾರೆ. ಆ ಬಗ್ಗೆ ವ್ಯಾಪಕ ಪ್ರಚಾರ ನಡೆಸಲು ಬಿಜೆಪಿ ಇನ್ನೊಂದೆಡೆ ಮುಂದಾಗಿದೆ. ಕಾಂಗ್ರೆಸ್ ಇಂದು ಸಂಪೂರ್ಣವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿಯಂತ್ರಣದಲ್ಲಿದೆ ಎಂದು ಹೇಳಿರುವ ಆರ್.ಪಿ. ಸಿಂಗ್, ಅದರಿಂದಲೇ ತರೂರ್ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ತಮ್ಮ ಲೇಖನದಲ್ಲಿ ಹೊಗಳಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಶಶಿ ತರೂರ್‌ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದೇ ಎಂಬು ದನ್ನು ಇನ್ನಷ್ಟೇ ನೋಡಬೇಕಾಗಿದೆ.