ನಟ-ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫಾ ನಿಧನ
ಎರ್ನಾಕುಳಂ: ಮಲಯಾಳ ಸಿನಿಮಾ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫಾ (೬೪) ಕೊಚ್ಚಿಯಲ್ಲಿ ನಿನ್ನೆ ನಿಧನ ಹೊಂದಿದರು. ಇವರು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದರು. ಉಸಿರಾಟ ತೊಂದರೆಯಿಂದ ಬುಧವಾರದಂದು ಅವರನ್ನು ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸಂಜೆ ನಿಧನ ಹೊಂದಿದರು.
ಹನೀಫಾ ಸುಮಾರು ೩೫೦ ಮಲಯಾಳ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಹೆಚ್ಚಾಗಿ ಹಾಸ್ಯ ಪಾತ್ರಗಳಾಗಿವೆ. ಮಾತ್ರವಲ್ಲ ೬೦ರಷ್ಟು ಧಾರಾವಾಹಿಗಳಲ್ಲೂ ನಟಿಸಿದ್ದರು. ಕಲಾಭವನ ತಂಡದ ಸದಸ್ಯರಾಗಿರುವ ಇವರು ಪ್ರಸಿದ್ಧ ಮಿಮಿಕ್ಸ್ ಪರೇಡ್ ಸಹಿತ ಹಲವು ಸ್ಟೇಜ್ ಶೋಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಇವರು ಅರ್ಬುದ ರೋಗದಿಂದ ಬಳಲುತ್ತಿದ್ದರು.
ಮಟ್ಟಾಂಜೇರಿ ಕರುವೇಲಿಪ್ಪಾಡಿ ಆರ್.ಕೆ. ರಸ್ತೆಯ ದಿ| ಹಂಸ-ಸುಬೈದಾ ದಂಪತಿ ಪುತ್ರರಾಗಿರುವ ಹನೀಫಾ ‘ಚೆಪ್ಪು ಕಿಲಕುನ್ನ ಚಂಙಾದಿ’ ಎಂಬ ಸಿನಿಮಾದ ಮೂಲಕ ಚಲನಚಿತ್ರರಂಗಕ್ಕೆ ಕಾಲಿರಿಸಿದ್ದರು. ಮೃತರು ಪತ್ನಿ ವಾಹಿದಾ, ಮಕ್ಕಳಾದ ಶಾರೂಕ್, ಸಿತಾರಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಹನೀಫಾರ ನಿಧನಕ್ಕೆ ಮಲಯಾಳ ಚಿತ್ರರಂಗ ಕಂಬನಿ ಮಿಡಿದಿದೆ.