ಬೈಕ್ ಕಳವುಗೈದು ಕಳ್ಳರು ಹೆಲ್ಮೆಟ್ ಧರಿಸದೆ ಪರಾರಿ: ಕಾನೂನು ಉಲ್ಲಂಘನೆ ಆರೋಪಿಸಿ ಮಾಲಕನಿಗೆ ದಂಡ ಹೇರಿ ನೋಟೀಸು

ಹೊಸದುರ್ಗ: ಕಳವುಗೈದ ಬೈಕ್‌ನಲ್ಲಿ ಕಳ್ಳರು ಪರಾರಿಯಾಗಿದ್ದು, ಇದೇ ವೇಳೆ ಸವಾರರು ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣ ನೀಡಿ ಅದರ ಮಾಲಕನಿಗೆ ಮೋಟಾರು ವಾಹನ ಇಲಾಖೆ ೯೫೦೦ರೂಪಾಯಿ  ದಂಡ ಹೇರಿದ ನೋಟೀಸು ಕಳುಹಿಸಿದ ಘಟನೆ ನಡೆದಿದೆ. ಬಿಎಂಎಸ್ ಮಡಿಕೈ ವಲಯ ಉಪಾಧ್ಯಕ್ಷರೂ, ಹೊಸದುರ್ಗದಲ್ಲಿ ತಲೆಹೊರೆ ಕಾರ್ಮಿಕನಾಗಿರುವ  ಎಚ್ಚಿಕಾನಂ ಚೆಂಬಿಲೋಡ್ ನಿವಾಸಿ ಕೆ. ಭಾಸ್ಕರನ್‌ರ ಬೈಕ್ ಕಳವಿಗೀಡಾಗಿದೆ.   ಬೈಕ್‌ನ್ನು ಕಳ್ಳರು ಹೊಸದುರ್ಗದಿಂದ ಕಲ್ಲಿಕೋಟೆ ವರೆಗೆ ಹೆಲ್ಮೆಟ್ ಧರಿಸದೆ ಕೊಂಡೊಯ್ದಿದ್ದಾರೆ. ಇದು ವಿವಿಧೆಡೆಗಳ ಸಿಸಿ ಕ್ಯಾಮರಾಗಳಲ್ಲಿ  ಸೆರೆಯಾಗಿದೆ. ಇದರಿಂದ ಬೈಕ್‌ನ ಮಾಲಕನಾದ ಭಾಸ್ಕರನ್ ೯೫೦೦ ರೂಪಾಯಿ ದಂಡ ಪಾವತಿಸುವಂತೆ ತಿಳಿಸಿ ನೋಟೀಸು ಲಭಿಸಿದೆ.

ಕಳೆದ ಜೂನ್ ೨೭ರಂದು ಹೊಸದುರ್ಗ ಮದನ್ ಆರ್ಕೇಡ್ ಬಿಲ್ಡಿಂಗ್‌ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಹೀರೋ ಫ್ಯಾಶನ್ ಪ್ಲಸ್ ಬೈಕ್ ಕಳವಿಗೀಡಾಗಿದೆ.  ಎರ್ನಾಕುಳಂನಲ್ಲಿ ನಡೆದ ಬಿಎಂಎಸ್ ಸಮ್ಮೇಳನ ಮುಗಿದು ಜೂನ್ ೩೦ರಂದು ಭಾಸ್ಕರನ್ ಮರಳಿ ಬಂದಾಗಲೇ ಬೈಕ್ ಕಳವುಹೋದ ವಿಷಯ ಅರಿವಿಗೆ ಬಂದಿತ್ತು. ಭಾಸ್ಕರನ್ ಈ ಬಗ್ಗೆ  ಅದೇ ದಿನ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಬೈಕ್ ಪತ್ತೆಯಾಗಬಹುದೆಂಬ ನಿರೀಕ್ಷೆಯಿಂದ ಅಂದು ಕೇಸು ದಾಖಲಿಸಿರಲಿಲ್ಲ. ಈ ಮಧ್ಯೆ ಹೆಲ್ಮೆಟ್ ಧರಿಸದೆ ಸಂಚರಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ದಂಡ ಹೇರಿ ಭಾಸ್ಕರನ್‌ಗೆ ನೋಟೀಸು ಲಭಿಸಿದೆ. ಹೊಸದುರ್ಗದಿಂದ ಕಲ್ಲಿಕೋಟೆ ವರೆಗೆ ೫ರಷ್ಟು ಎಐ ಕ್ಯಾಮರಾದಲ್ಲಿ  ಬೈಕ್‌ನ ದೃಶ ಸೆರೆಯಾಗಿದ್ದು, ಈ ಬಗ್ಗೆ ನೋಟೀಸ್‌ನಲ್ಲಿ ತಿಳಿಸಲಾಗಿದೆ. ಇದರಿಂದ ಭಾಸ್ಕರನ್ ಮತ್ತೆ ಪೊಲೀಸ್ ಠಾಣೆಗೆ ತಲುಪಿ ವಿಷಯ ತಿಳಿಸಿದ್ದು, ಈವೇಳೆ ಬೈಕ್ ಕಳವು ಬಗ್ಗೆ ಕೇಸು ದಾಖಲಿಸಲಾಗಿದೆ.  ಎಐ ಕ್ಯಾಮರಾದಲ್ಲಿ ಸೆರೆಯಾದ ಚಿತ್ರದ ಆಧಾರದಲ್ಲಿ  ಕಳ್ಳರನ್ನು ಸೆರೆಹಿಡಿಯಲಿರುವ  ಪ್ರಯತ್ನವನ್ನು ಪೊಲೀಸರು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page