ಸರಣಿ ವಾಹನ ಅಪಘಾತ: ಮಕ್ಕಳು ಸೇರಿ ೧೦ ಮಂದಿಗೆ ಗಾಯ
ಕಾಸರಗೋಡು: ಮೂರೆಡೆಗಳಲ್ಲಾಗಿ ನಡೆದ ವಾಹನ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಹತ್ತು ಮಂದಿ ಗಾಯಗೊಂಡ ಘಟನೆಗಳು ನಡೆದಿವೆ.
ಪೊಯಿನಾಚಿಗೆ ಸಮೀಪದ ಕಲ್ಲಾಳಿ ಮುನಬಂ ಬಸ್ ತಂಗುದಾಣದ ಬಳಿ ನಿನ್ನೆ ಮಧ್ಯಾಹ್ನ ಜೀಪೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಬೇಕಲ ಶಿಕ್ಷಣ ಉಪಜಿಲ್ಲೆಯ ನಿವೃತ್ತ ಶಿಕ್ಷಣ ಅಧಿಕಾರಿ ಕಲ್ಲಳಿ ಕುಂಬಳಂಪಾರೆಯ ಕೆ. ಶ್ರೀಧರನ್ (೫೭) ಅವರ ಮಗ ಮತ್ತು ಸಂಬಂಧಿಕರಾದ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜೀಪು ಸಂಪೂರ್ಣ ನಜ್ಜುಗುಜ್ಜಾಗಿದೆ.
ಚಟ್ಟಂಚಾಲ್- ದೇಳಿ ರಸ್ತೆಯ ಶಿವಪುರಂ ರಸ್ತೆ ತಿರುವಿನಲ್ಲಿ ನಿನ್ನೆ ಕಾರು ಮತ್ತು ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಪ್ರಯಾಣಿಕರಾದ ವಿದ್ಯಾನಗರ ಚಾಲ ರಸ್ತೆ ಬಳಿಯ ಕೆ.ಎನ್. ನಿವಾಸದ ಕೆ.ಎನ್. ಪ್ರಬಿಜಿತ್ (೨೩) ಮತ್ತು ಅವರ ಸ್ನೇಹಿತ ನಿಧೀಶ್ (೨೪) ಎಂಬವರು ಗಾಯಗೊಂಡಿದ್ದಾರೆ,
ಮಾಂಙಾಡ್ ತಿರುವಿನಲ್ಲಿ ಕಾರುಗಳೆರಡು ಪರಸ್ಪರ ಢಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಚಟ್ಟಂಚಾಲ್ ನಿಝಾಮುದ್ದೀನ್ ನಗರ ಕುರುಕುನ್ನಿಲ್ ಹೌಸ್ನ ನಿಝಾಮುದ್ದೀನ್ (೨೭), ಆಯಿಷತ್ ತಸ್ನಿ (೨೫), ಮೊಹಮ್ಮದ್ ಅಶ್ರಫ್ (೫೦) ಮತ್ತು ಹಸೀನಾ (೪೦) ಎಂಬವರು ಗಾಯಗೊಂಡಿದ್ದಾರೆ.