ಕೇರಳ ಹೈಕೋರ್ಟ್‌ಗಾಗಿ 1000 ಕೋಟಿ ರೂ. ವೆಚ್ಚದಲ್ಲಿ  ಜ್ಯುಡೀಶಿಯಲ್ ಸಿಟಿ ನಿರ್ಮಾಣ

ತಿರುವನಂತಪುರ: ಕೇರಳ ಹೈಕೋರ್ಟ್‌ಗಾಗಿ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಜ್ಯುಡೀಶಿಯಲ್ ಸಿಟಿ (ನ್ಯಾಯಾಂಗ ನಗರ) ಸಮುಚ್ಚಯ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಹೈಕೋರ್ಟ್ ಈಗ ನೆಲೆಗೊಂಡಿರುವ ಜಾಗದಲ್ಲಿ ಅದನ್ನು ನವೀಕರಿಸಲು ಈಗ ಅಗತ್ಯದಷ್ಟು ಸ್ಥಳ ಸೌಕರ್ಯವಿಲ್ಲ. ಅದರಿಂದಾಗಿ ಕಲ್ಯಾಶ್ಶೇರಿಯಲ್ಲಿ ಹೈಕೋರ್ಟ್‌ಗಾಗಿ ಜ್ಯುಡೀಶಿಯಲ್ ಸಿಟಿ ಎಂಬ ಯೋಜನೆಯಡಿ ಈ ಹೊಸ ನ್ಯಾಯಾಲಯ ಸಮುಚ್ಚಯವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಪಿ. ರಾಜೀವ್ ತಿಳಿಸಿದ್ದಾರೆ.

ಪ್ರಸ್ತುತ ಯೋಜನೆಗೆ ಕೇಂದ್ರ ಸರಕಾರದ ಆರ್ಥಿಕ ನೆರವು ಲಭಿಸುವಂತೆ ಮಾಡುವ ಅಗತ್ಯದ ಕ್ರಮದಲ್ಲೂ ರಾಜ್ಯ ಗೃಹ ಇಲಾಖೆ ತೊಡಗಿದೆ. ಈ ಹೊಸ ನ್ಯಾಯಾಲಯ ಸಮುಚ್ಚಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದಾಗಿ ಕೇಸು ಇತ್ಯಾದಿಗಳಿಗಾಗಿ ಬರುವ ಜನರಿಗೂ ಆಗತ್ಯದ ಸೌಕರ್ಯ ಏರ್ಪಡಿಸಲಾಗುವುದು. ಜ್ಯುಡೀಶಿಯಲ್ ಸಿಟಿ ನಿರ್ಮಿಸುವ ಸ್ಥಳವನ್ನು ಹೈಕೋರ್ಟ್‌ನ ನ್ಯಾಯಾಧೀಶರುಗಳೇ ಗುರುತಿಸಿದ್ದಾರೆ.

ಹೈಕೋರ್ಟ್‌ಗಾಗಿ ಹೊಸ ಸಮುಚ್ಚಯ ನಿರ್ಮಿಸುವ ಬಗ್ಗೆ 2023ರಲ್ಲೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರು ಮುಖ್ಯಮಂತ್ರಿಯವರೊಂದಿಗೆ ಸಮಾಲೋಚನೆ ನಡೆಸಿದ್ದರು. ಆ ಯೋಜನೆಗೆ ಸರಕಾರ ಈಗ ವಿದ್ಯುಕ್ತವಾಗಿ ಅಂಗೀಕಾರ ನೀಡಿದೆ. 27 ಎಕ್ರೆ ಜಾಗದಲ್ಲಿ ಈ ಹೊಸ ನ್ಯಾಯಾಲಯ ಸಮುಚ್ಚಯವನ್ನು ನಿರ್ಮಿಸಲಾಗುವುದು. ಇದು ಒಟ್ಟು ೧೨ ಲಕ್ಷ ಸ್ಕ್ವೇರ್‌ಫೀಟ್ ವಿಸ್ತೀರ್ಣ ಹೊಂದಿದೆ. ಏಳು ಅಂತಸ್ತಿನ ಸಮುಚ್ಚಯ ನಿರ್ಮಿಸಲಾಗುವುದೆಂದು  ಸಚಿವರು ತಿಳಿಸಿದ್ದಾರೆ.

You cannot copy contents of this page