ವೃದ್ಧೆ ಏಕಾಂಗಿಯಾಗಿ ವಾಸಿಸುವ ಮನೆಯಿಂದ 5 ಪವನ್ ಚಿನ್ನ, 50 ಸಾವಿರ ರೂ. ಕಳವು

ಪೆರ್ಲ:  ವೃದ್ಧೆಯೊಬ್ಬರು ಏಕಾಂಗಿಯಾಗಿ  ವಾಸಿಸುವ ಮನೆಯ ಬಾಗಿಲು ಮುರಿದು  ಒಳನುಗ್ಗಿದ ಕಳ್ಳರು 2 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ದೋಚಿದ್ದಾರೆ.  ಏಳ್ಕಾನ ಬಳಿಯ ಬಾಳೆಗುಳಿ ನಿವಾಸಿ  ಪಾರ್ವತಿ (73) ಎಂಬವರ ಮನೆಯಿಂದ ಕಳವು ನಡೆದಿದೆ. ಮೊನ್ನೆ ರಾತ್ರಿ ಕಳವು ನಡೆದಿದ್ದು ನಿನ್ನೆ ಬೆಳಿಗ್ಗೆ ಈ ಬಗ್ಗೆ ತಿಳಿದುಬಂದಿದೆ.

ಪಾರ್ವತಿಯವರ ಪುತ್ರಿ ನೀಲೇಶ್ವರದಲ್ಲಿ ವೈದ್ಯೆಯಾಗಿದ್ದಾರೆ. ಆದ್ದರಿಂದ ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ  ಪಾರ್ವತಿ ಪ್ರತಿದಿನ ಸಂಜೆ ಸಮೀಪದಲ್ಲಿರುವ ತರವಾಡು ಮನೆಗೆ ತೆರಳಿ ಮರುದಿನ ಬೆಳಿಗ್ಗೆ ಸ್ವಂತ ಮನೆಗೆ ಮರಳುತ್ತಿದ್ದರು. ಇದರಂತೆ ಮೊನ್ನೆ ಸಂಜೆ ತರವಾಡು ಮನೆಗೆ ಹೋದ ಪಾರ್ವತಿ ನಿನ್ನೆ ಬೆಳಗ್ಗೆ ತನ್ನ ಮನೆಗೆ ಮರಳಿದಾಗ ಮುಂಭಾಗದ ಬಾಗಿಲು ಮುರಿದಸ್ಥಿತಿಯಲ್ಲಿ ಕಂಡುಬಂದಿದೆ. ಮನೆಯೊಳಗೆ ತೆರಳಿ ನೋಡಿದಾಗ ಕಪಾಟಿನಲ್ಲಿದ್ದ ಬಟ್ಟೆಬರೆಗಳೆಲ್ಲ ಚೆಲ್ಲಾಪಿಲ್ಲಿಯಾದ ಸ್ಥಿತಿಯಲ್ಲಿತ್ತು. ಅಲ್ಲದೆ ಕಪಾಟಿನಲ್ಲಿದ್ದ 2 ಪವನ್‌ನ ಚಿನ್ನದ ಸರ, ಬೆಂಡೋಲೆಗಳು ಹಾಗೂ 50 ಸಾವಿರ ರೂಪಾಯಿ ಕಳವಿಗೀಡಾಗಿರುವುದಾಗಿ ತಿಳಿದುಬಂದಿದೆ.ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page