ಬೆಳ್ಳಂಬೆಳಗ್ಗೆ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಾಕ್ಕೂಟ್ಟತ್ತಿಲ್ ಸೆರೆ
ಪತ್ತನಂತಿಟ್ಟ: ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಾಕೂಟ್ಟತ್ತಿಲ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪತ್ತಂತಿಟ್ಟ ಅಡೂರು ಮುಂಡಪ್ಪಳ್ಳಿಯಲ್ಲಿರುವ ರಾಹುಲ್‌ರ ಮನೆಗೆ ಇಂದು ಬೆಳ್ಳಂಬೆಳಗ್ಗೆ ತಿರುವನಂತಪುರ ಕಂಟೋನ್ಮೆಂಟ್ ಪೊಲೀಸರು ಆಗಮಿಸಿ ಆ ಮನೆಯಲ್ಲಿ ಸುತ್ತುವರಿದು ಅವರನ್ನು ಬಂಧಿಸಿದ್ದಾರೆ. ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ತಿರುವನಂತಪುರದ ಸೆಕ್ರೆಟರಿಯೇಟ್‌ಗೆ ನಡೆಸಲಾದ ಮುತ್ತಿಗೆ ಚಳವಳಿಗೆ ಸಂಬಂಧಿಸಿ ರಾಹುಲ್‌ರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯನ್ನಾಗಿ ರಾಹುಲ್‌ರನ್ನು ಹೆಸರಿಸಲಾಗಿದೆ.
ರಾಹುಲ್‌ರನ್ನು ಬಂಧಿಸಿದ ಬೆನ್ನಲ್ಲೇ ಯೂತ್ ಕಾಂಗ್ರೆಸ್ ರಾಜ್ಯದಾದ್ಯಂತ ಪ್ರತಿಭಟನೆಗೆ ಇಳಿದಿದ್ದಾರೆ. ನವಕೇರಳ ಯಾತ್ರೆ ವೇಳೆ ಡಿವೈಎಫ್‌ಐ ಕಾರ್ಯಕರ್ತರು ಮತ್ತು ಮುಖ್ಯ ಮಂತ್ರಿಯವರ ಅಂಗರಕ್ಷಕರು ಸೇರಿ ಹಲವರು ಕೆಎಸ್‌ಯು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಪ್ರತಿಭಟಿಸಿ ಯೂತ್ ಕಾಂಗ್ರೆಸ್ ಕೆಲವು ದಿನಗಳ ಹಿಂದೆ ಸೆಕ್ರೆಟರಿಯೇಟ್ ಮಾರ್ಚ್ ನಡೆಸಿತ್ತು. ಅದು ಭಾರೀ ಘರ್ಷಣೆಗೂ ದಾರಿ ಮಾಡಿಕೊಟ್ಟಿತ್ತು. ಅದಕ್ಕೆ ಸಂಬಂಧಿಸಿ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್‌ರನ್ನು ಒಂದನೇ ಆರೋಪಿಯಾಗಿ ಹಾಗೂ ರಾಹುಲ್ ಮತ್ತು ಶಾಸಕ ಶಾಫಿ ಪರಂಬಿಲ್ ಸೇರಿದಂತೆ ೫೦೦ರಷ್ಟು ಮಂದಿ ವಿರುದ್ಧ ತಿರುವನಂತಪುರ ಕಂಟೋನ್ಮೆಂಟ್ ಪೊಲೀಸರು ಜಾಮೀನುರಹಿತ ಪ್ರಕರಣ ದಾಖಲಿಸಿ ಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್‌ರನ್ನು ಪೊಲೀಸರು ಇಂದು ಮುಂಜಾನೆ ಅವರ ಮನೆಗೆ ಮುತ್ತಿಗೆ ಹಾಕಿ ಬಂಧಿಸಿ ತಿರುವನಂತಪುರಕ್ಕೆ ಸಾಗಿದ್ದಾರೆ.