ಜಾತ್ರೆ ವೀಕ್ಷಿಸಿ ಮರಳುತ್ತಿದ್ದ ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ
ಹೊಸದುರ್ಗ: ಜಾತ್ರೆ ವೀಕ್ಷಿಸಿ ಮರಳುತ್ತಿದ್ದ ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ತಂಡ ಪರಾರಿಯಾದ ಘಟನೆ ನಡೆದಿದೆ. ಮಡಿಕೈ ಕಾಲಿಚ್ಚಾಂಪೊದಿ ಪುದುಚ್ಚೇರಿ ನಿವಾಸಿ ಕೆ.ಪಿ. ದೇವಕಿ (೬೭) ಎಂಬವರ ಎರಡೂವರೆ ಪವನ್ನ ಸರವನ್ನು ಎಗರಿಸಲಾಗಿದೆ. ಇಂದು ಮುಂಜಾನೆ ೫.೩೦ರ ವೇಳೆ ಘಟನೆ ನಡೆದಿದೆ. ಮಾದೋತ್ ಎಂಬಲ್ಲಿನ ಕ್ಷೇತ್ರದಲ್ಲಿ ಜಾತ್ರೆ ವೀಕ್ಷಿಸಿ ದೇವಕಿ ಮನೆಗೆ ನಡೆದು ಹೋಗುತ್ತಿದ್ದರು. ಈ ವೇಳೆ ಅದಯಿ ಸೇತುವೆ ಸಮೀಪಕ್ಕೆ ತಲುಪಿದಾಗ ಬೈಕ್ನಲ್ಲಿ ತಲುಪಿದ ಇಬ್ಬರು ಮಾಲೆ ಎಗರಿಸಿ ಪರಾರಿಯಾಗಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಹಾಡಹಗಲೇ ದ್ವಿಚಕ್ರ ವಾಹನಗಳಲ್ಲಿ ತಲುಪಿ ಸರ ಎಗರಿಸುವ ಕೃತ್ಯ ತೀವ್ರಗೊಂಡಿತ್ತು. ಈ ತಂಡದ ವಿರುದ್ಧ ಪೊಲೀಸರು ನಿಗಾ ವಹಿಸುತ್ತಿರುವಾಗಲೇ ಮತ್ತೊಂದು ಘಟನೆ ನಡೆದಿದೆ. ಇದೇ ರೀತಿಯ ಘಟನೆ ಪುನರಾವರ್ತಿಸಲು ಸಾಧ್ಯತೆ ಇದೆಯೆಂದೂ ಆದ್ದರಿಂದ ಜಾತ್ರೆ ಸಹಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಏಕಾಂಗಿಯಾಗಿ ಮರಳುವವರು ಜಾಗ್ರತೆ ಪಾಲಿಸಬೇಕೆಂದು ಪೊಲೀಸರು ನಿರ್ದೇಶ ನೀಡಿದ್ದಾರೆ.
ದೇವಕಿಯವರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದವರ ಪತ್ತೆಗಾಗಿ ಪೊಲೀಸರು ಸಮೀಪದ ಸಿಸಿಟಿವಿ ಕ್ಯಾಮರಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.