ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತೀಯಾ ಸಮಾಜ ಬೇಡಿಕೆ: ಹಕ್ಕುಘೋಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ಆರಂಭ

ಕುಂಬಳೆ: ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳನ್ನು ತೀಯಾ ಸಮುದಾಯಕ್ಕೆ ಮೀಸಲಿರಿಸಬೇಕು,  ಈಳವರಿಂದ ಪ್ರತ್ಯೇಕಿಸಿ ತೀಯಾ ಸಮಾಜವನ್ನು ಪ್ರತ್ಯೇಕ ಜಾತಿಯಾಗಿ ನೋಂದಾಯಿಸಬೇಕು ಮೊದಲಾದ ಬೇಡಿಕೆ ಮುಂದಿರಿಸಿ ತೀಯಾ ಕ್ಷೇಮ ಸಭಾ ಆಂದೋಲನ ಆರಂಭಿಸಿದೆ.  ಹೋರಾಟದಂಗವಾಗಿ ಹಕ್ಕು ಘೋಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ಕುಂಬಳೆಯಿಂದ ಮೊನ್ನೆ ಆರಂಭಗೊಂಡಿತು. ಸದ್ಗುರು ನಿತ್ಯಾನಂದ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಆರಂಭಗೊಂಡ ಪ್ರಚಾರ ಯಾತ್ರೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಪಾವೂರು ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ತೀಯಾ ಕ್ಷೇಮ ಸಭಾ ರಾಜ್ಯಾಧ್ಯಕ್ಷ ರವಿ ಕುಳಂಗರ ನೇತೃತ್ವ ವಹಿಸಿದರು. ಮಲಬಾರಿನ 25 ವಿಧಾನಸಭಾ ಕ್ಷೇತ್ರಗಳಲ್ಲಿ ತೀಯಾ ಸಮಾಜ ನಿರ್ಣಾಯಕ ಶಕ್ತಿಯಾಗಿದ್ದು ಸಮಾಜ ಸಂಘಟಿತ ರಾಜಕೀಯ ಶಕ್ತಿಯಾದರೆ ಸರಕಾರ ನಮ್ಮ ಬೇಡಿಕೆಗೆ ಮಣಿಯಲಿದೆಯೆಂದು  ಸಂಘಟನೆ ತಿಳಿಸಿದೆ.  ರಾಘವನ್ ಪಣಿಕ್ಕರ್, ರಾಜೀವನ್ ಪಳ್ಳಿಕಂಡಿ, ಚಂದ್ರನ್ ಆರಂಗಾಡಿ, ಕೆಡಿಪಿ ನಾಯಕ ನ್ಯಾಯವಾದಿ ಬಶೀರ್ ಆಲಡಿ, ಸತೀಶನ್ ಕೂವತ್ತೊಟ್ಟಿ, ನಾಗೇಶ್ ಕುಂಬಳೆ ಮಾತನಾಡಿದರು. ಯಾತ್ರೆಗೆ  ಸೀತಾಂಗೋಳಿ, ಬದಿಯಡ್ಕ, ಮುಳ್ಳೇರಿಯ, ಕಾಸರಗೋಡು ಮೊದಲಾದೆಡೆಗಳಲ್ಲಿ ಸ್ವಾಗತ ನೀಡಲಾಯಿತು.ನಾಳೆ ಸಂಜೆ 5 ಗಂಟೆಗೆ ತೃಕರಿಪುರದಲ್ಲಿ ಸಮಾಪ್ತಿಯಾಗಲಿದೆ.

You cannot copy contents of this page