ಕಾಸರಗೋಡು: ಭಾರತದ ಸಂವಿಧಾನವು ಸಂತ್ರಸ್ತ ಜನತೆಯ ಹಾಗೂ ಸಮಾನ ನೀತಿಯ ಒಂದು ಪ್ರಣಾಳಿಕೆ ಯಾಗಿದೆ ಎಂದು ಅರಣ್ಯ ಖಾತೆ ಸಚಿವ ಎ.ಕೆ. ಶಶೀಂದ್ರನ್ ಹೇಳಿದ್ದಾರೆ. ವಿದ್ಯಾನಗರದ ಸ್ಟೇಡಿಯಂನಲ್ಲಿ ಭಾರತದ ೭೭ನೇ ಗಣರಾಜ್ಯೋತ್ಸವದಂಗವಾಗಿ ನಿನ್ನೆ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದುವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು.
ಫೆಡರಲಿಸಂ ಎನ್ನುವುದು ನಮ್ಮ ಸಂವಿಧಾನದ ಮೂಲ ಘಟಕವಾಗಿದೆ. ಅಧಿಕಾರ ವಿಭಜನೆ ಹಾಗೂ ಪರಸ್ಪರ ಗೌರವ ಇದರ ಪ್ರಧಾನ ಅಂಶವಾಗಿದೆ. ಭಾರತೀಯ ಫೆಡರಲಿಸಂ ನಮ್ಮ ವೈವಿಧ್ಯತೆಯನ್ನು ಸಂಘಟಿತವಾಗಿ ನಿಲ್ಲಿಸುವ ಒಂದು ರಾಷ್ಟ್ರೀಯ ಸಾಮೂಹಿಕ ಒಡಂಬಡಿಕೆಯೂ ಆಗಿದೆ. ಆದರೆ ದುರಾದೃಷ್ಟಕರವೆಂಬಂತೆ ನಮ್ಮ ಫೆಡರಲಿಸಂ ಇಂದು ಭಾರೀ ದೊಡ್ಡ ಸವಾಲುಗಳನ್ನು ಎದುರಿಸತೊಡಗಿದೆ. ರಾಜ್ಯಗಳ ಸಂವಿಧಾನಾತ್ಮಕ ಹಕ್ಕುಗಳ ಮೇಲೆ ಅತಿಕ್ರಮಣ ಹಾಗೂ ಆರ್ಥಿಕ ಪಾಲುಗಳನ್ನು ನಿರಾಕರಿಸುವ ಯತ್ನಗಳು ಇಂದು ನಡೆಯುತ್ತಿದ್ದು, ಇದು ಫೆಡರಲಿಸಂ ವ್ಯವಸ್ಥೆಯ ಪತನಕ್ಕೆ ದಾರಿ ಮಾಡಿಕೊಡಲಿದೆ ಎಂದು ಸಚಿವರು ಹೇಳಿದರು.
೧೨ ನದಿಗಳನ್ನು ಹೊಂದಿರುವ ಸಪ್ತಭಾಷಾ ಸಂಗಮಭೂಮಿಯಾಗಿರುವ ಕಾಸರಗೋಡಿನ ಕಲಾ ಸಾಂಸ್ಕೃತಿಕ ವೈವಿದ್ಯಗಳು ಇಡೀ ಭಾರತಕ್ಕೆ ಮಾದರಿಯಾಗಿವೆ. ಭಾರತದಲ್ಲಿ ಔದ್ಯೋಗಿಕ ಪಕ್ಷಿ ಹಾಗೂ ಹೂವನ್ನು ಘೋಷಿಸಿರುವ ಜಿಲ್ಲೆಯೂ ಆಗಿದೆ ಕಾಸರಗೋಡು ಎಂದು ಸಚಿವರು ಹೇಳಿದರು. ಜಿಲ್ಲಾಧಿಕಾರಿಯಾವರ ಉಸ್ತುವಾರಿ ಹೊಣೆಗಾರಿಕೆ ಹೊಂದಿರುವ ಎಡಿಎಂ ಪಿ. ಅಖಿಲ್, ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ವಿಜಯ್ ಭರತ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪೊಲೀಸರು, ಎನ್‌ಸಿಸಿ, ಸ್ಕ್ವಾಡ್,. ಸ್ಟುಡೆಂಟ್ ಪೊಲೀಸ್ ಕೆಡೆಟ್, ಸಶಸ್ತ್ರ, ಪೊಲೀಸರು ಮೊದಲಾದವರಿಂದ ಆಕರ್ಷಕ ಪರೇಡ್ ಕೂಡಾ ಈ ಸಂದರ್ಭದಲ್ಲಿ ನಡೆಯಿತು.







