ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಮನೆಯಿಂದ ಕಳವು ನಡೆಸಿದ ಆರೋಪಿಯನ್ನು ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸುವುದರೊಂದಿಗೆ ತನ್ನ ಮನೆಯಿಂದ ನಡೆದ ಕಳವು ಬಗ್ಗೆ ಸೂಚನೆ ಲಭಿಸಬಹದೇ ಎಂಬ ನಿರೀಕ್ಷೆಯನ್ನು ಶಾಂತಿಪಳ್ಳದ ಸುಬೈರ್ ವ್ಯಕ್ತಪಡಿಸಿದ್ದಾರೆ.
2024 ಮಾರ್ಚ್ 25ರಂದು ಸುಬೈರ್‌ರ ಮನೆಯಿಂದ ಕಳವು ನಡೆದಿತ್ತು. ಮನೆಯ ಬಾಗಿಲು ಮುರಿದು ಒಳನುಗ್ಗದ ಕಳ್ಳರು ಕಪಾಟಿನಲ್ಲಿಟ್ಟಿದ್ದ 25 ಪವನ್ ಚಿನ್ನಾಭರಣ, 450 ದಿರ್ಹಾಂ, 5 ಹೊಸ ಟಿ ಶರ್ಟ್‌ಗಳು, 1 ಭಾರೀ ಮೌಲ್ಯದ ಶೂ ಮೊದಲಾದವುಗಳನ್ನು ಕಳ್ಳರು ದೋಚಿದ್ದರು. ಕಳವು ನಡೆದು ಎರಡು ವರ್ಷವಾಗುತ್ತಾ ಬಂದರೂ ಕಳ್ಳರ ಕುರಿತು ಯಾವುದೇ ಸೂಚನೆ ಲಭಿಸಿಲ್ಲ. ಇದೇ ವೇಳೆ ನಾಯ್ಕಾಪು ನಿವಾಸಿ ನ್ಯಾಯವಾದಿಯ ಮನೆಯಿಂದ ಕಳವು ನಡೆಸಿದ ಆರೋಪಿಯನ್ನು ಸಮಗ್ರ ತನಿಖೆಗೊಳಪಡಿಸುವುದರ ಮೂಲಕ ಸುಬೈರ್‌ರ ಮನೆ ಕಳವು ಪ್ರಕರಣ ಬೆಳಕಿಗೆ ಬರಬಹುದೇ ಎಂಬ ನಿರೀಕ್ಷೆಯನ್ನು ಪೊಲೀಸರು ಕೂಡಾ ವ್ಯಕ್ತಪಡಿಸಿದ್ದಾರೆ. ಮನೆ ಮಾಲಕ ಸುಬೈರ್ ಗಲ್ಫ್ ಉದ್ಯೋಗಿಯಾಗಿದ್ದಾರೆ. ಇವರ ಪತ್ನಿ ಹಾಗೂ ಮಗಳು ಸಂಬಂಧಿಕರ ಮನೆಗೆ ತೆರಳಿ ಮರುದಿನ ಮರಳುವಷ್ಟರಲ್ಲಿ ಮನೆಯಿಂದ ಚಿನ್ನಾಭರಣ ಸಹಿತ ವಿವಿಧ ಸೊತ್ತುಗಳು ಕಳವಿಗೀಡಾಗಿತ್ತು.







