ಕಾಸರಗೋಡು: ರಸ್ತೆ ದುರಸ್ತಿಗೆ ಚಾಲನೆ ನೀಡಿದಾಗ ಅದು ಸ್ಥಳೀಯರ ಸಂಚಾರಕ್ಕೇ ಸಮಸ್ಯೆ ತಂದಿತ್ತ ಘಟನೆ ಕೋಟೆಕಣಿಯಲ್ಲಿ ಸಂಭವಿಸಿದೆ. ಇಲ್ಲಿನ ಕ್ರಾಸ್‌ರೋಡ್ ದುರಸ್ತಿಗಾಗಿ ಕಾಮಗಾರಿ ಆರಂಭಿಸಲಾಗಿದ್ದು, ಆದರೆ ಅರ್ಧದಲ್ಲೇ ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ಈಗ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ ಹಲವು ದಿನಗಳಿಂದ ರಸ್ತೆಗೆ ದೊಡ್ಡಗಾತ್ರದ ಜಲ್ಲಿಗಳನ್ನು ತಂದು ಹಾಕಲಾಗಿದ್ದು, ಅದಕ್ಕೆ ಕಲ್ಲಿನ ಹುಡಿಯನ್ನು ಕೂಡಾ ಬೆರೆಸಲಾಗಿದೆ. ಇದು ಸಂಚಾರ ಸಮಸ್ಯೆಯನ್ನು ಸೃಷ್ಟಿಸಿದ ಜೊತೆಯಲ್ಲೇ ಸ್ಥಳೀಯರಿಗೆ ಧೂಳಿನ ಸಮಸ್ಯೆಯನ್ನೂ ಉಂಟುಮಾಡಿದೆ.
ಈ ಪರಿಸರದ ಮನೆಗಳ ಗೋಡೆಗಳಲ್ಲಿ ಈಗ ಧೂಳು ತುಂಬಿಕೊಂಡಿದ್ದು, ವಾಸಮಾಡಲು ಕೂಡಾ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆಯ ದುರಸ್ತಿ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರನಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಕೂಲೇ ದುರಸ್ತಿ ಮಾಡುವುದಾಗಿ ತಿಳಿಸುವುದಲ್ಲದೆ, ಕಳೆದ ಹಲವು ದಿನಗಳಿಂದ ಇದೇ ಸ್ಥಿತಿ ಮುಂದುವರಿದಿದೆ. ದಿನನಿತ್ಯ ನೂರಾರು ವಾಹನಗಳು ಹಾಗೂ ಅಂಗನವಾಡಿ ಮಕ್ಕಳ ಸಹಿತ ಜನರು ಸಂಚರಿಸುವ ಈ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.






