ಮಾನಂತವಾಡಿ: ಕಾರಿಗೆ ಪೆಟ್ರೋಲ್ ಸುರಿದು ಕಿಚ್ಚಿರಿಸಿ ಪತಿ ಸಾವನ್ನಪ್ಪಿ ಪತ್ನಿ ಮತ್ತು ಮೂವರು ಇಬ್ಬರು ಮಕ್ಕಳು ಗಂಭೀರ ಸುಟ್ಟು ಗಾಯಗೊಂಡ ಘಟನೆ ವಯನಾಡಿ ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಕಣ್ಣೂರು ಇರಿಟ್ಟಿ ವಳ್ಳಿತ್ತೋಡ್ ನಿವಾಸಿ ಹಾಗೂ ಕರ್ನಾಟಕದಲ್ಲಿ ದೀರ್ಘಕಾಲ ವ್ಯಾಪಾರ ನಡೆಸುತ್ತಿದ್ದ ಸಜೀರ್ (೪೪) ಸಾವನ್ನಪ್ಪಿದ ವ್ಯಕ್ತಿ. ಗಂಭೀರ ಗಾಯಗೊಂಡ ಇವರ ಪತ್ನಿ ನಜ್ಮುನ್ನೀಸ (30), ಮಕ್ಕಳಾದ ನಿಬ್ರಾನ್ (14), ನಿಸಾನ್ (9) ಮತ್ತು ಆಯಿಷಾ (2) ರನ್ನು ವಯನಾಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಮಾನಂತವಾಡಿ-ತಲಶ್ಶೇರಿ ರೂಟ್‌ನ ಎರುಮತ್ತೆರು ಎಂಬಲ್ಲಿ ಈ ಘಟನೆ ನಡೆದಿದೆ. ಇದೊಂದು ಆತ್ಮಹತ್ಯೆಯಾಗಿದೆಯೆಂದು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಸಜೀರ್ ಆತ್ಮಹತ್ಯೆಗೈದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕಾರಿಗೆ ಬೆಂಕಿ ತಗಲಿದಾಕ್ಷಣ ಪರಿಸರ ನಿವಾಸಿಗಳು ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿ ಗಾಯಗೊಂಡವರನ್ನು ಕಾರಿನಿಂದ ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದರೂ ಸಜೀರ್‌ನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.






