ಕಾಸರಗೋಡು: ವ್ಯಕ್ತಿ ಪಲ್ಲಟ ನಡೆಸಿ ನಕಲಿ ದಾಖಲೆ ತಯಾರಿಸಿ ವಾಹನ ಮಾರಾಟಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿ 16 ವರ್ಷಗಳ ಬಳಿಕ ಸೆರೆಗೀಡಾಗಿದ್ದಾನೆ. ಕರ್ನಾಟಕದ ಮುಲ್ಕಿ ಹಳೆಯಂಗಡಿ ಚಂದ್ರಮೌಳೀಶ್ವರ ಕ್ಷೇತ್ರ ಸಮೀಪದ ಗಣೇಶ್ ಶೆಟ್ಟಿ (50) ಎಂಬಾತನನ್ನು ಕಣ್ಣೂರು, ಕಾಸರಗೋಡು ರೇಂಜ್ ಕ್ರೈಂ ಬ್ರಾಂಚ್ ಎಸ್ಪಿ ಕೆ.ವಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್ಪಿ ಟಿ. ಮಧುಸೂದನನ್ ಬಂಧಿಸಿದ್ದಾರೆ.
೨೦೦೨ರಲ್ಲಿ ಮಂಜೇಶ್ವರ ಪೊಲೀಸರು ಗಣೇಶ್ ಶೆಟ್ಟಿಯನ್ನು ಆರೋಪಿಯಾಗಿಸಿ ಕೇಸು ದಾಖಲಿ ಸಿಕೊಂಡಿದ್ದರು. ಕ್ವಾಲಿಸ್ ವಾಹನವನ್ನು ನಕಲಿ ದಾಖಲೆ ತಯಾರಿಸಿ ವ್ಯಕ್ತಿಪಲ್ಲಟ ನಡೆಸಿ ಕರುಣಾಕರ ಭಂಡಾರಿ ಎಂಬವರಿಗೆ ಮಾರಾಟಗೈದು ಹಣ ಪಡೆಯಲಾಗಿತ್ತು. ಅನಂತರವೇ ಬೇರೆ ವ್ಯಕ್ತಿಯ ವಾಹನವನ್ನು ನಕಲಿ ದಾಖಲೆ ತಯಾರಿಸಿ ತನಗೆ ಮಾರಾಟಗೈದಿ ರುವುದಾಗಿ ಕರುಣಾಕರ ಭಂಡಾರಿಗೆ ತಿಳಿದುಬಂದಿದೆ. ಇದರಂತೆ ಅವರು ನೀಡಿದ ದೂರಿನಲ್ಲಿ ಪೊಲೀಸರು ಕೇಸು ದಾಖಲಿಸಿ ಗಣೇಶ್ ಶೆಟ್ಟಿಯನ್ನು ಬಂಧಿಸಿದ್ದರು. ಅನಂತರ ಈತ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ತಪ್ಪಿಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ 2007ರಲ್ಲಿ ಈತನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಆರೋಪಿಯನ್ನು ಬಂಧಿಸಿದ ತಂಡದಲ್ಲಿ ಕ್ರೈಂ ಬ್ರಾಂಚ್ ಎಸ್.ಐ ರವೀಂದ್ರನಾಥ್, ಎಎಸ್ಐ ಪ್ರಮೋದ್, ಸೀನಿಯರ್ ಸಿಪಿಒ ಗೋಪನ್, ಚಾಲಕ ರಂಜಿತ್ ಕುಮಾರ್ ಎಂಬಿವರಿದ್ದರು.






