ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ನಿಂದ ಕಟ್ಟಡ ನಂಬ್ರ ಲಭಿಸಲು ವರ್ಗಾವಣೆಗೊಂಡ ಪಂಚಾಯತ್ ಕಾರ್ಯದರ್ಶಿಯ ಹೆಸರಲ್ಲಿ ನಕಲಿ ಪ್ರಮಾಣಪತ್ರ ಹಾಗೂ ನಕಲಿ ಹಣ ಪಾವತಿಸಿದ ರಶೀದಿ ತಯಾರಿಸಿದ ಆರೋಪದಂತೆ ಓರ್ವನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪಂಚಾಯತ್ ಮಾಜಿ ಕಾರ್ಯದರ್ಶಿ ಕೋಟ್ಟಯಂ ನಿವಾಸಿಯಾದ ಸಿದ್ದಾರ್ಥನ್ ನೀಡಿದ ದೂರಿನಂತೆ ಕೊಡ್ಯಮ್ಮೆ ಪೂಕಟ್ಟೆಯ ಫಾರೂಕ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಜನವರಿ 14ರಂದು ಈ ಘಟನೆ ನಡೆದಿದೆ. ಫಾರೂಕ್ನ ಮಾಲಕತ್ವದಲ್ಲಿರುವ ಉಳ್ವಾರ್ ಎಂಬಲ್ಲಿನ ಕಟ್ಟಡಕ್ಕೆ ನಂಬ್ರ ಲಭಿಸಲು ಬೇಕಾದ ದಾಖಲೆಪತ್ರ ಗಳನ್ನು ನಕಲಿಯಾಗಿ ತಯಾರಿಸಲಾ ಗಿದೆ. ಕಳೆದ ಸೆಪ್ಟಂಬರ್ 25ರಂದು ಕಾರ್ಯದರ್ಶಿ ಕುಂಬಳೆಯಿಂದ ವರ್ಗಾವಣೆಗೊಂಡಿದ್ದರು. ನವಂಬರ್ 27ರಂದು ರೆಗ್ಯುಲರೈಸೇಶನ್ ಆರ್ಡರ್, ಆಕ್ಯುಪೆನ್ಸಿ ಸರ್ಟಿಫಿಕೇಟ್, ಹಣ ಪಾವತಿಸಿದ ರಶೀದಿ ನಕಲಿ ಯಾಗಿ ತಯಾರಿಸಿ ಸಲ್ಲಿಸಿರುವುದಾಗಿ ದೂರಲಾಗಿದೆ. ನಕಲಿ ದಾಖಲೆಗಳನ್ನು ತಯಾರಿಸಲು ಇತರರ ಸಹಾಯ ಪಡೆಯಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






