ಕಾಸರಗೋಡು: ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಜ್ಯಾರಿಗೊಳ್ಳುವ ಮೊದಲೇ ಜಿಲ್ಲೆಯಲ್ಲಿ ಸಿಪಿಎಂ ತನ್ನ ಅಭ್ಯರ್ಥಿಗಳನ್ನು ಖಚಿತಪಡಿಸಿದೆ. ಇದರಂತೆ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಹಾಲಿ ಶಾಸಕ ಸಿ.ಎಚ್. ಕುಂಞಂಬುರನ್ನು ಮತ್ತೆ ಕಣಕ್ಕಿಳಿಸಲು ಸಿಪಿಎಂ ತೀರ್ಮಾನಿಸಿದ್ದು, ತೃಕ್ಕರಿಪುರ ಕ್ಷೇತ್ರದಲ್ಲಿ ನ್ಯಾಯವಾದಿ ವಿ.ಪಿ.ಪಿ. ಮುಸ್ತಫಾರನ್ನು ಅಭ್ಯರ್ಥಿಯ ನ್ನಾಗಿಸಲು ಪಕ್ಷ ನಿರ್ಧರಿಸಿದೆ.
ಕಾಸರಗೋಡು ಜಿಲ್ಲಾ ಪಂಚಾ ಯತ್ನ ಈ ಹಿಂದಿನ ಉಪಾಧ್ಯಕ್ಷ ಶಾನವಾಸ್ ಪಾದೂರುರನ್ನು ಕಾಸರ ಗೋಡು ಅಥವಾ ಮಂಜೇಶ್ವರದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಸಿಪಿಎಂ ಚಿಂತನೆ ನಡೆಸಿದೆ.
ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಇ.ಪಿ. ಜಯರಾಜನ್, ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ರ ಸಾನ್ನಿಧ್ಯದಲ್ಲಿ ನಿನ್ನೆ ನಡೆದ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ತೃಕ್ಕರಿಪುರ ಶಾಸಕ ಎಂ. ರಾಜಗೋಪಾಲನ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಆರಿಸಲ್ಪಟ್ಟ ಹಿನ್ನೆಲೆಯಲ್ಲಿ ಅವರು ಪ್ರತಿನಿಧೀಕರಿಸುವ ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ವಿ.ಪಿ.ಪಿ ಮುಸ್ತಫಾರನ್ನು ಕಣಕ್ಕಿಳಿಸುವ ತೀರ್ಮಾನಕ್ಕೆ ಸಿಪಿಎಂ ಬಂದಿದೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಗೋವಿಂದನ್ ಪಳ್ಳಿಕಾಪಿಲ್ರನ್ನು ಎಡರಂಗದ ಅಭ್ಯರ್ಥಿಯನ್ನಾಗಿಸುವ ತೀರ್ಮಾನವನ್ನು ಸಿಪಿಐ ಈ ಹಿಂದೆಯೇ ಕೈಗೊಂಡಿತ್ತು. ಉದುಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಇ. ಪದ್ಮಾವತಿಯವರ ಹೆಸರನ್ನೂ ಪರಿಗಣಿಸಲಾಗಿತ್ತಾದರೂ, ಕೊನೆಗೆ ಹಾಲಿ ಶಾಸಕ ಕುಂಞಂಬುರ ಹೆಸರನ್ನೇ ಸಭೆ ಅಂತಿಮಗೊಳಿಸಿದೆ.






