ಕಾಸರಗೋಡು: ರಾಜ್ಯದ ರಾಜಧಾನಿಯಾದ ತಿರುವನಂತಪುರ ಕಾರ್ಪೋರೇಶನ್ನ ಆಡಳಿತವನ್ನು ಜನರು ಬಿಜೆಪಿಗೆ ದೊರಕಿಸಿಕೊಟ್ಟಿರು ವುದು ಕೇರಳದಲ್ಲಿ ಬಿಜೆಪಿ ಆಡಳಿತ ಬರಬೇಕೆಂಬ ಉದ್ದೇಶದಿಂದಾಗಿದೆ. ರಾಜಧಾನಿ ನಗರದ ಜನರ ಆಗ್ರಹವನ್ನು ಸಾರ್ಥಕಗೊಳಿಸಲು ಕಾಸರಗೋಡು ಸಹಿತ ಕೇರಳದಾದ್ಯಂತದ ಮತದಾರರಿಗೆ ಸಾಧ್ಯವಾಗಲಿದೆ ಯೆಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್ ತಿಳಿಸಿದರು. ನವೀಕರಿಸಿದ ಕಾಸರಗೋಡು ಬಿಜೆಪಿ ಜಿಲ್ಲಾ ಕಮಿಟಿ ಕಚೇರಿ,ಎನ್ಡಿಎ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಹಾಗೂ ಶಕ್ತಿ ಕೇಂದ್ರ ಇನ್ಚಾರ್ಜ್ ರವರುಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿಪಿಎಂ ಹಾಗೂ ಸಚಿವ ಸಂಪು ಟವನ್ನು ಸ್ವಾಧೀನದಲ್ಲಿರಿಸಿಕೊಂಡ ರೀತಿಯಲ್ಲಿ ಅಯ್ಯಪ್ಪನನ್ನು ಇಲ್ಲದಾಗಿಸಲು ಪಿಣರಾಯಿ ವಿಜಯನ್ ಮತ್ತೆ ಮತ ಯಾಚಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ನಷ್ಟಗೊಂಡ ಸೀಟುಗಳಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ. ಕೋಮು ಶಕ್ತಿಗಳಿಗೆ ಅಧಿಕಾರವನ್ನು ನೀಡಿದ ಜನರು ಈ ಬಾರಿ ಯುಡಿಎಫ್ ಹಾಗೂ ಎಲ್ಡಿಎಫ್ನ್ನು ತಿರಸ್ಕರಿಸುವುದು ಖಚಿತಗೊಂಡಿದೆ. ಉತ್ತಮ ಆಡಳಿತವನ್ನು ರಾಜ್ಯದಲ್ಲಿ ನಡೆಸಲು ಬಿಜೆಪಿಗೆ ಮಾತ್ರವೇ ಸಾಧ್ಯವಾಗಲಿದೆ ಎಂದವರು ತಿಳಿಸಿದರು. ಇತ್ತೀಚೆಗೆ ಆರೋಗ್ಯ ಸಚಿವೆಯ ಕಪಟ ನಾಟಕವನ್ನು ಜನರು ಕಂಡಿದ್ದಾರೆ. ಕೇರಳದ ಆರೋಗ್ಯ ವಲಯ ಐಸಿಯು ನಲ್ಲಿದೆ. ಜನರು ದೇಹದೊಳಗೆ ಕತ್ತರಿಯನ್ನು ಇರಿಸಿಕೊಂಡು ಜೀವಿಸಬೇಕಾದ ಸ್ಥಿತಿ ಉಂಟಾಗಿದೆ. ಇದಕ್ಕೆಲ್ಲಾ ಮುಂದಿನ ಚುನಾವಣೆ ಯಲ್ಲಿ ಜನರು ತೀರ್ಪು ನೀಡಲಿದ್ದಾರೆ. ರಾಜ್ಯದ ಅಭಿವೃದ್ಧಿ ಹಾಗೂ ಕೈಗಾರಿಕೆ, ಕೃಷಿ ವಲಯದ ಮುನ್ನಡೆಗೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಅನಿವಾರ್ಯವಾಗಿದೆಯೆಂದು ಅದಕ್ಕಾಗಿ ಜನರು ಎನ್ಡಿಎಯನ್ನು ಬೆಂಬಲಿಸಬೇಕೆಂದು ಅವರು ಕರೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಕೆ.ಜಿ. ಮಾರಾರ್ರ ಪ್ರತಿಮೆಗೆ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಹಾರಾರ್ಪಣೆ ಮಾಡಿದರು. ದೀನ್ ದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪ್ರತಿಮೆಗಳನ್ನು ಸಿ.ಕೆ. ಪದ್ಮನಾಭನ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಅನಾವರಣಗೊಳಿಸಿದರು. ರಾಜ್ಯ ಕೋ-ಆರ್ಡಿನೇಟರ್ ನ್ಯಾಯವಾದಿ ವಿ.ಕೆ.ಸಜೀವನ್, ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಉಪಾಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನಿಲ್, ಮನುಲಾಲ್ ಮೇಲತ್, ಎನ್. ಬಾಬುರಾಜ್, ರಾಜ್ಯ ಸಮಿತಿ ಸದಸ್ಯರಾದ ಎ. ವೇಲಾಯುಧನ್, ರಾಮಪ್ಪ ಮಂಜೇಶ್ವರ, ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ, ಮಾಜಿ ಜಿಲ್ಲಾಧ್ಯಕ್ಷ ಎ. ಕರುಣಾಕರನ್ ಮಾಸ್ತರ್, ರಾಮಕೃಷ್ಣನ್ ವಾಳನ್ನೋರಡಿ, ರಾಮಚಂದ್ರನ್ ಮೊದಲಾದವರು ಮಾತನಾಡಿದರು.





