ಕುಂಬಳೆ: ಇಚ್ಲಂಪಾಡಿ, ಛತ್ರಂಪಳ್ಳ ಭಾಗಗಳಲ್ಲಿ ನಿನ್ನೆ ಸಂಜೆ ಕಾಡುಕೋಣ ಕಂಡುಬಂದ ಬಗ್ಗೆ ವರದಿಯಾಗಿದೆ. ಈ ಭಾಗದ ರಸ್ತೆಯಲ್ಲಿ ನಿನ್ನೆ ಸಂಜೆ ಸಂಚರಿಸುತ್ತಿದ್ದವರಿಗೆ ಕಾಡು ಕೋಣ ಕಾಣಿಸಿದೆ. ಜನರನ್ನು ಕಂಡೊಡನೆ ಕೋಣ ಓಡಿ ಸಮೀಪದ ಹಿತ್ತಿಲಿಗೆ ನುಗ್ಗಿದೆ. ವಿಷಯ ತಿಳಿದು ಅರಣ್ಯಾಧಿ ಕಾರಿಗಳು ತಲುಪಿ ಹುಡುಕಾಡಿದರೂ ಕಾಡುಕೋಣ ವನ್ನು ಪತ್ತೆಹಚ್ಚಲಾಗಿಲ್ಲ. ಈ ಭಾಗದ ಕಾಡಿನಲ್ಲಿ ಎಲ್ಲಾದರೂ ಕೋಣ ತಂಗಿರಬಹುದೆಂದು ಅಂದಾಜಿಸಲಾಗಿದೆ. ಕಳೆದ ಸೋಮವಾರ ರಾತ್ರಿ ನೀರ್ಚಾಲು ಬಳಿಯ ಕನ್ಯಪ್ಪಾಡಿ ಯಲ್ಲೂ ಕಾಡುಕೋಣ ಕಂಡುಬಂ ದಿತ್ತು. ಅಲ್ಲಿ ಬೀದಿ ನಾಯಿಗಳು ದಾಳಿಗೆ ಮುಂದಾಗುತ್ತಿದ್ದಂತೆ ಕೋಣ ಓಡಿ ಹೋಗಿತ್ತು. ಅನಂತರ ಆ ಪರಿಸರದಲ್ಲಿ ಕಂಡುಬಂದ ಬಗ್ಗೆ ವರದಿಯಾಗಿಲ್ಲ. ಅದೇ ಕಾಡುಕೋಣ ಇದೀಗ ಇಚ್ಲಲಂಪಾಡಿ ಭಾಗಕ್ಕೆ ತಲುಪಿರಬಹುದೇ ಎಂದು ಸಂಶಯವುಂಟಾಗಿದೆ. ಕಾಡುಕೋಣ ಕಂಡುಬಂದಿದೆಯೆಂಬ ಸುದ್ದಿ ಹರಡುತ್ತಿದ್ದಂತೆ ಜನರು ಆತಂಕಿತರಾಗಿದ್ದಾರೆ. ಅದನ್ನು ಪತ್ತೆಹಚ್ಚಿ ಈ ಭಾಗದಿಂದ ತೆರವುಗೊಳಿಸಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.






