ಎರಡು ಉದ್ಘಾಟನೆ ನಡೆದರೂ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್ ಬೋರ್ಡ್‌ಗಳ ತೆರವಿಗೆ ಕ್ರಮವಿಲ್ಲ: ವಾಹನ ಚಾಲಕರಿಗೆ ಗೊಂದಲ

ಕುಂಬಳೆ: ದೂರವ್ಯಾಪ್ತಿಯನ್ನು ಉಲ್ಲಂಘಿಸಿ ಸ್ಥಾಪಿಸಿದ ಕುಂಬಳೆ ಆರಿಕ್ಕಾಡಿ  ಟೋಲ್‌ಗೇಟ್ ಮುಚ್ಚುಗಡೆಗೊಳಿಸಿದರೂ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ  ಸ್ಥಾಪಿಸಿದ ಟೋಲ್‌ಗೇಟ್ ಸೂಚನಾ ಫಲಕಗಳು ಅದೇ ರೀತಿ ಉಳಿದುಕೊಂಡಿವೆ.  ಆರಿಕ್ಕಾಡಿಯಲ್ಲಿ ಹಾಗೂ ಕುಂಬಳೆ ಬದರ್ ಸುಮಾ ಮಸೀದಿ ಸಮೀಪ ಟೋಲ್‌ಗೇಟ್‌ನ ಸೂಚನಾ ಫಲಕಗಳನ್ನು ಸ್ಥಾಪಿಸಲಾಗಿದೆ. ಟೋಲ್ ಬೂತ್ ರದ್ದುಗೊಳ್ಳುವುದರೊಂದಿಗೆ ಫಲಕಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಅದಕ್ಕೆ ಸಿದ್ಧವಾಗದಿರುವುದು ವಾಹನ ಚಾಲಕರಿಗೆ ಗೊಂದಲ ಸೃಷ್ಟಿಸುತ್ತಿದೆ.

ಕಳೆದ ವಾರ ಕಾಮಗಾರಿ ಪೂರ್ತಿಗೊಳಿಸಿದ ತಲಪಾಡಿ -ಚೆಂಗಳ ರೀಚ್ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಚ್ಚಿಯಲ್ಲಿ ಉದ್ಘಾಟಿಸಿದ್ದರು. ರಾಜ್ಯ ಸಚಿವ  ಪಿ.ಎ. ಮೊಹಮ್ಮದ್ ರಿಯಾಸ್‌ರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಮಂತ್ರಿಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಿತ ರಾಜ್ಯದ ಸಚಿವರು ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು. ಇದೇ ವೇಳೆ ಕಾಸರಗೋಡಿನಲ್ಲಿ ಶಾಸಕ ಸಿ.ಎಚ್. ಕುಂಞಂಬು ಅವರ ನೇತೃತ್ವದಲ್ಲಿ ಎಲ್‌ಡಿಎಫ್ ಕಾರ್ಯಕರ್ತರು ಸೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಾಂತರ ಉದ್ಘಾಟನೆ ನಡೆಸಿದ್ದರು. ಉದ್ಘಾಟನೆ ನಡೆದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಲ್ಲದ ಟೋಲ್‌ಗೇಟ್‌ನ ಸೂಚನಾ ಫಲಕಗಳನ್ನು  ಅದೇ ರೀತಿಯಲ್ಲಿ ಉಳಿಸಿಕೊಂಡಿರುವುದು ಆಶ್ಚರ್ಯಕರವೆಂದು ನಾಗರಿಕರು ಹೇಳುತ್ತಿದ್ದಾರೆ.

RELATED NEWS

You cannot copy contents of this page